ಕೆನರಾ ಬ್ಯಾಂಕ್ ನೂತನ ಶಾಖೆ ಉದ್ಘಾಟನೆ
ಪ್ರತಿಯೊಬ್ಬರು ಬ್ಯಾಂಕ್ ಖಾತೆ ಹೊಂದುವುದು ಅಗತ್ಯ – AGM ಅರುಣ್ ಕುಮಾರ್ ಎ.ಜಿ
ಕುರುಗೋಡು: ಪಟ್ಟಣದ ಕಂಪ್ಲಿ ರಸ್ತೆಯ ಪಕ್ಕದಲ್ಲಿ ನಿರ್ಮಾಣಗೊಂಡ ಕೆನರಾ ಬ್ಯಾಂಕ್‌ನ ನೂತನ ಶಾಖೆಯನ್ನು ಸೋಮವಾರ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಬಳ್ಳಾರಿ ಕ್ಷೇತ್ರಿಯ ಕಾರ್ಯಾಲಯದ ಮುಖ್ಯ ವ್ಯವಸ್ಥಾಪಕರಾದ AGM ಅರುಣ್ ಕುಮಾರ್ ಎ.ಜಿ ಮಾತನಾಡಿ, “ಪ್ರತಿಯೊಬ್ಬರು ವ್ಯಾವಹಾರಿಕವಾಗಿ ಬ್ಯಾಂಕ್ ಖಾತೆ ಹೊಂದುವುದು ಅಗತ್ಯ. ಪ್ರತಿ ಐದು ಸಾವಿರ ಜನಸಂಖ್ಯೆಗೆ ಒಂದು ಶಾಖೆ ತೆರೆಯುವ ಮೂಲಕ ವಾಣಿಜ್ಯ ವ್ಯವಹಾರಗಳನ್ನು ಉತ್ತೇಜಿಸಿ, ಆ ಭಾಗದ ಅಭಿವೃದ್ದಿ ಸಾಧಿಸಿ ಬಲಿಷ್ಠ ಭಾರತ ನಿರ್ಮಿಸುವುದು ಕೇಂದ್ರ ಸರ್ಕಾರದ ಉದ್ದೇಶ” ಎಂದು ಹೇಳಿದರು.
ಶಾಖಾ ಮ್ಯಾನೇಜರ್ ಆನಂದ್ ಜೆ ಮಾತನಾಡಿ, “ನಮ್ಮ ಕುರುಗೋಡು ಶಾಖೆಯಲ್ಲಿ ಗೃಹ ಸಾಲ, ವಾಣಿಜ್ಯ ಸಾಲ, ಕೃಷಿ ಸಾಲ, ಹೈನುಗಾರಿಕೆ ಸಾಲ ಸೇರಿದಂತೆ ಅನೇಕ ಸಾಲ ಸೌಲಭ್ಯಗಳಿವೆ. ಜೊತೆಗೆ ಸರ್ಕಾರದ ಅನುದಾನಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸುವ ವ್ಯವಸ್ಥೆಯೂ ಲಭ್ಯವಿದೆ. ತಾಲೂಕು ಹಾಗೂ ಸುತ್ತಮುತ್ತಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಖಾತೆ ತೆರೆದು ವಹಿವಾಟು ನಡೆಸಿ ಸದುಪಯೋಗ ಪಡೆಯಬೇಕು” ಎಂದು ಹೇಳಿದರು.
ಕಾರ್ಯಕ್ರಮವನ್ನು ಬಳ್ಳಾರಿ ಶಾಖೆಯ ಘನಮಲ್ಲಿ ಆರ್ ನಿರೂಪಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ನರಸಪ್ಪ, ಪಿಎಸ್ಐ ಸುಪ್ರೀತ್ ವಿರುಪಕ್ಷಪ್ಪ, ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷ ನಾಗಿರೆಡ್ಡಿ, ಉಪತಹಸೀಲ್ದಾರ್ ಮಲ್ಲೇಶಪ್ಪ, ಶಿರಾಸಧಾರ್ ಆರ್. ವಿಜಯಕುಮಾರ್, ಅಗ್ನಿಶಾಮಕ ದಳ ಅಧಿಕಾರಿ ಬಿ. ಶಿವಕುಮಾರ್ ಹಾಗೂ ಬ್ಯಾಂಕ್ ಸಿಬ್ಬಂದಿ ಭರತ್ ಕುಮಾರ್, ಈರಣ್ಣ ಕೆ. ಸೇರಿದಂತೆ ಅನೇಕ ಗಣ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ವರದಿ : ಅಣ್ಣಯ್ಯ ಸ್ವಾಮಿ, ಕುರುಗೋಡು