ಬಳ್ಳಾರಿಯಲ್ಲಿ ಬಿಜೆಪಿಯಿಂದ ಪ್ರತಿಭಟನಾ ಸಮಾವೇಶ
ಡ್ರಗ್ಸ್–ಗೃಹಲಕ್ಷ್ಮಿ ಯೋಜನೆ ‘ಲೂಟಿ’ ವಿರುದ್ಧ ಪಾದಯಾತ್ರೆ: ಆರ್. ಅಶೋಕ್ ಎಚ್ಚರಿಕೆ
ಬ್ಯಾನರ್ ಗಲಭೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ನಾಯಕರ ಒತ್ತಾಯ
ಬಳ್ಳಾರಿ: ನಗರದ ಎಪಿಎಂಸಿ ಆವರಣದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಭಾರೀ ಪ್ರತಿಭಟನಾ ಸಮಾವೇಶವನ್ನು ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಡೀ ಕರ್ನಾಟಕ “ಉರಿಯುವ ಮನೆ”ಯಂತಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯದಾದ್ಯಂತ ಗಲಭೆ, ಅತ್ಯಾಚಾರ, ದರೋಡೆ ಪ್ರಕರಣಗಳು ಹೆಚ್ಚಾಗಿವೆ. ಶಾಸಕರಿಗೂ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಸರ್ಕಾರಕ್ಕೆ ಇದರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಲಂಚ, ಅಧಿಕಾರ ಹಸ್ತಾಂತರ ಹಾಗೂ ದುರ್ಬಳಕೆಯಲ್ಲೇ ಸರ್ಕಾರ ಮುಳುಗಿದೆ ಎಂದು ಆರೋಪಿಸಿದರು.
ಜನರು ಕಾಂಗ್ರೆಸ್‌ನ್ನು ಯಾಕೆ ಗೆಲ್ಲಿಸಿದ್ದಾರೆ ಎಂಬುದನ್ನೇ ಸರ್ಕಾರ ಮರೆತಿದೆ. ಜನರಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೇ, ಮತದಾರರಿಗೆ ಅಪಮಾನ ಮಾಡುತ್ತಿದೆ ಎಂದು ಕಿಡಿಕಾರಿದರು.
ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಭೆ ಪ್ರಕರಣವನ್ನು ಉಲ್ಲೇಖಿಸಿದ ಅವರು, ಪೂರ್ವನಿಯೋಜಿತವಾಗಿ ಬ್ಯಾನರ್ ಕಟ್ಟುವ ಮೂಲಕ ಶಾಸಕ ಜನಾರ್ದನ ರೆಡ್ಡಿ ಅವರನ್ನು ಕೊಲ್ಲುವ ಉದ್ದೇಶದಿಂದಲೇ ಘಟನೆ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು. ಈ ಪ್ರಕರಣವನ್ನು ಕೂಡಲೇ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಡ್ರಗ್ಸ್ ವ್ಯವಹಾರ ಹಾಗೂ ಗೃಹಲಕ್ಷ್ಮಿ ಯೋಜನೆಯಲ್ಲಿ ನಡೆದಿರುವ ‘ಲೂಟಿ’ ವಿರುದ್ಧ ರಾಜ್ಯದಾದ್ಯಂತ ಪಾದಯಾತ್ರೆ ನಡೆಸಲಾಗುವುದು ಎಂದು ಆರ್. ಅಶೋಕ್ ಎಚ್ಚರಿಕೆ ನೀಡಿದರು.
ಬಿಜೆಪಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಸಮಾವೇಶಕ್ಕೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ನಗಾರಿ ಭಾರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು, ಮಾಜಿ ಶಾಸಕ ಸುರೇಶ್ ಬಾಬು ಸೇರಿದಂತೆ ಅನೇಕ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
