ಹೊಯ್ಸಳರ ಕಾಲದ ಶಾಸನೋಕ್ತ ಯುದ್ಧ ವೀರಗಲ್ಲು ಪತ್ತೆ
ಪ್ರಾಧ್ಯಾಪಕ ತಳವಾರ ನರಸಿಂಹ ಅವರ ತಂಡದಿಂದ ಮಹತ್ವದ ಶೋಧನೆ
ಕಂಪ್ಲಿ: ಕಂಪ್ಲಿ ತಾಲೂಕಿನ ಬಳ್ಳಾಪುರ ಗ್ರಾಮದ ಹರಿಜನ ದೊಡ್ಡ ಮಾಯಪ್ಪ ಅವರ ಗದ್ದೆಯಲ್ಲಿ ಅಪರೂಪದ ಶಾಸನೋಕ್ತ ಯುದ್ಧ ವೀರಗಲ್ಲು ಪತ್ತೆಯಾಗಿದೆ. ಲಿಪಿ ಮತ್ತು ಶಿಲ್ಪ ಶೈಲಿಯ ಆಧಾರದ ಮೇಲೆ ಈ ವೀರಗಲ್ಲು 12–13ನೇ ಶತಮಾನದ ಹೊಯ್ಸಳರ ಕಾಲಕ್ಕೆ ಸೇರಿದ್ದಾಗಿದೆ ಎಂದು ಅಂದಾಜಿಸಲಾಗಿದೆ. ಇದು ಕಂಪ್ಲಿ ತಾಲೂಕಿನಲ್ಲಿರುವ ಅತ್ಯಂತ ಮಹತ್ವದ ಹಾಗೂ ವಿಶಿಷ್ಟ ವೀರಗಲ್ಲುಗಳಲ್ಲಿ ಒಂದಾಗಿದೆ.
ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ, ಮೈಸೂರು ಸಂಸ್ಥೆಯ ನಿರ್ದೇಶಕರಾದ ಡಾ. ಮುನಿರತ್ನಂ ಅವರು ಶಾಸನ ಪಾಠವನ್ನು ಓದಿಕೊಟ್ಟಿದ್ದು, ನಾಗಯ ಎಂಬ ವೀರನು ಚಿಂಮತ್ತನಕಲ್ಲು ಅಥವಾ ಚಿತ್ರದುರ್ಗ ಪ್ರದೇಶದಲ್ಲಿ ನಡೆದ ಕಾಳಗದಲ್ಲಿ ವೀರಮರಣ ಹೊಂದಿದ ಉಲ್ಲೇಖ ಇದರಲ್ಲಿ ದೊರಕಿದೆ.
ಈ ವೀರಗಲ್ಲು ಸುಮಾರು 5 ಅಡಿ ಎತ್ತರ ಹಾಗೂ 2 ಅಡಿ ಅಗಲ ಹೊಂದಿದ್ದು, ಕಪ್ಪುಶಿಲೆಯಲ್ಲಿ ನಿರ್ಮಿತವಾಗಿದೆ. ಮೂರು ಫಲಕಗಳನ್ನು ಒಳಗೊಂಡಿರುವ ಈ ಬೃಹತ್ ಗಾತ್ರದ ವೀರಗಲ್ಲಿನಲ್ಲಿ ವೀರ ನಾಗಯನ ಯುದ್ಧ, ವೀರಮರಣ ಮತ್ತು ಸ್ವರ್ಗಾರೋಹಣದ ದೃಶ್ಯಗಳನ್ನು ಶಿಲ್ಪಗಳ ಮೂಲಕ ವಿವರಿಸಲಾಗಿದೆ.
ಶಾಸನ ಪಾಠ (ಸಾರಾಂಶ)
ಗೋನೆಯ ನಾಯಕ ಎಂಬ ಪ್ರಾಂತ್ಯಾಧಿಕಾರಿಯ ಮಗ ಬೊಮ್ಮಯ್ಯನ ಪುತ್ರ ನಾಗಯ್ಯ ಎಂಬ ವೀರನು ತನ್ನ ರಾಜ್ಯದ ರಕ್ಷಣೆಗೆ ವಿರೋಧಿ ಪಡೆಯೊಂದಿಗೆ ಚಿಂಮತ್ತನಕಲ್ಲು ಎಂಬ ಸ್ಥಳದಲ್ಲಿ ಕಾಳಗ ಮಾಡಿ ಯುದ್ಧಭೂಮಿಯಲ್ಲಿ ವೀರಮರಣ ಹೊಂದಿ ಸ್ವರ್ಗ ಲೋಕವನ್ನು ಸೇರಿದನೆಂದು ಶಾಸನವು ತಿಳಿಸುತ್ತದೆ.ವೀರಗಲ್ಲಿನ ಮೂರು ಫಲಕಗಳ ವಿವರಣೆ
- ಕೆಳಭಾಗದ ಫಲಕ: ಕುದುರೆಯನ್ನೇರಿ ಯುದ್ಧದಲ್ಲಿ ನಿರತನಾಗಿರುವ ವೀರ ನಾಗಯನ ಶಿಲ್ಪ. ಹಿಂಭಾಗದಲ್ಲಿ ಬಿಲ್ಲು–ಬಾಣ ಹಿಡಿದ ಯೋಧರು ಹಾಗೂ ಎದುರಾಳಿ ಪಡೆಯ ವೀರರ ಶಿಲ್ಪಗಳಿವೆ.
- ಮಧ್ಯಭಾಗದ ಫಲಕ: ಮಂಟಪದೊಳಗೆ ಕೈ ಮುಗಿದು ಕುಳಿತಿರುವ ವೀರನ ಶಿಲ್ಪ. ರಂಭೆ–ಊರ್ವಶಿ ಕನ್ಯೆಗಳು ವೀರನನ್ನು ಸ್ವರ್ಗಕ್ಕೆ ಕರೆದೊಯ್ಯುವ ದೃಶ್ಯವಿದೆ. ಇದೇ ಭಾಗದಲ್ಲಿ ಮೂರು ಸಾಲಿನ ಶಾಸನ ಲಿಪಿಯೂ ಇದೆ.
- ಮೇಲ್ಭಾಗದ ಫಲಕ: ಈಶ್ವರ–ನಂದಿಯ ಶಿಲ್ಪಗಳೊಂದಿಗೆ ಕೈ ಮುಗಿದು ನಿಂತಿರುವ ವೀರನ ತೃಟಿತ ಶಿಲ್ಪ ಹಾಗೂ ಸೂರ್ಯ–ಚಂದ್ರರ ಆಕೃತಿಗಳು ಕಂಡುಬರುತ್ತವೆ.
ಸಂಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ತಳವಾರ ನರಸಿಂಹ ಹಾಗೂ ಅವರ ಸ್ನೇಹಿತರಾದ ನಾಗರಾಜ್, ಯಲ್ಲಪ್ಪ, ಚಿತ್ತವಾಡಗಿ ಯಲ್ಲಪ್ಪ ಮತ್ತು ಆಂಜನೇಯ ಅವರುಗಳು ಛಿದ್ರಗೊಂಡಿದ್ದ ಈ ವೀರಗಲ್ಲನ್ನು ಪುನಃ ಜೋಡಿಸಿ ಸಂರಕ್ಷಿಸುವ ಕಾರ್ಯವನ್ನು ಕೈಗೊಂಡಿದ್ದಾರೆ.
ಈ ಕಾರ್ಯದಲ್ಲಿ ಬಳ್ಳಾಪುರ ಗ್ರಾಮದ ಪ್ರಾಧ್ಯಾಪಕ ಮಂಜುನಾಥ್, ಪೊಲೀಸ್ ತಿಮ್ಮಯ್ಯ, ಬಸವರಾಜ್ ಮತ್ತು ಹರಿಜನ ದೊಡ್ಡ ಮಾಯಪ್ಪ ಅವರುಗಳು ಸಹಕಾರ ನೀಡಿದ್ದಾರೆ.
ಈ ವೀರಗಲ್ಲು ಕಂಪ್ಲಿ ಪ್ರದೇಶವು ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿತ್ತು ಎಂಬುದಕ್ಕೆ ಮಹತ್ವದ ಸಾಕ್ಷಿಯಾಗಿದೆ. ಕಂಪ್ಲಿ ತಾಲೂಕಿನ ಗ್ರಾಮಗಳಲ್ಲಿ ಕಂಡುಬರುವ ಇಂತಹ ಅಮೂಲ್ಯ ವೀರಗಲ್ಲುಗಳನ್ನು ಸಂರಕ್ಷಿಸುವ ಅಗತ್ಯ ತೀವ್ರವಾಗಿದೆ.

