ಮೆಟ್ರಿ ಗ್ರಾಮದಲ್ಲಿ “ನಮ್ಮೂರು -ನಮ್ಮ ಕೆರೆ” ಯೋಜನೆ: ಸಮಾಲೋಚನಾ ಸಭೆ ಹಾಗೂ ಕೆರೆ ಅಭಿವೃದ್ಧಿ ಸಮಿತಿ ರಚನೆ
ಮೆಟ್ರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ “ನಮ್ಮೂರು ನಮ್ಮ ಕೆರೆ” ಯೋಜನೆಯಡಿ ಮೇಟ್ರಿ ಗ್ರಾಮದ ಪ್ರದೇಶದಲ್ಲಿರುವ ಹೂಳು ತುಂಬಿಕೊಂಡಿರುವ ಊಟಿ ಕೊಳ್ಳದ ಕೆರೆಯನ್ನು ಅಭಿವೃದ್ಧಿಪಡಿಸಲು ಆಯ್ಕೆ ಮಾಡಲಾಗಿದೆ. ಕಾಮಗಾರಿ ಆರಂಭಕ್ಕೂ ಮೊದಲು ಪೂರ್ವಭಾವಿಯಾಗಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸಮಾಲೋಚನಾ ಸಭೆ ಹಾಗೂ ಕೆರೆ ಅಭಿವೃದ್ಧಿ ಸಮಿತಿ ರಚನೆ ಕಾರ್ಯಕ್ರಮವನ್ನು ಇಂದು ನಡೆಸಲಾಯಿತು.
ಸಭೆಯಲ್ಲಿ ಗ್ರಾಮದ ಸರ್ವ ಸದಸ್ಯರ ಸೂಚನೆಗಳಂತೆ 25 ಸದಸ್ಯರನ್ನು ಒಳಗೊಂಡ ಕೆರೆ ಅಭಿವೃದ್ಧಿ ಸಮಿತಿಯನ್ನು ರಚಿಸಲಾಯಿತು. ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಂಪ್ಲಿ ತಾಲೂಕಿನ ಯೋಜನಾಧಿಕಾರಿ ರಾಘವೇಂದ್ರ ಅವರು, ಈಗಾಗಲೇ ಕರ್ನಾಟಕ ರಾಜ್ಯದಲ್ಲಿ 929 ಕೆರೆ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿರುವುದಾಗಿ ತಿಳಿಸಿದರು. ಜೊತೆಗೆ ಯೋಜನೆಯ ಮೂಲಕ ವಿವಿಧ ಸಮುದಾಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ನಂತರ ಕಲ್ಯಾಣ ಕರ್ನಾಟಕ ಪ್ರಾದೇಶಿಕ ವಿಭಾಗದ ಕೆರೆ ಅಭಿಯಂತರರಾದ ಸತೀಶ ಅವರು, ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಕೈಗೊಳ್ಳಲಾಗುವ ಕಾರ್ಯಗಳು, ರೈತರು ಕೆರೆಯ ಮಣ್ಣು ತೆಗೆದುಕೊಂಡು ಹೋಗುವ ವಿಧಾನ ಹಾಗೂ ಮಂಜೂರಾತಿಗೆ ಸಲ್ಲಿಸಬೇಕಾದ ಅಗತ್ಯ ದಾಖಲೆಗಳ ಕುರಿತು ಮಾಹಿತಿ ನೀಡಿದರು.
ಈ ಸಮಾಲೋಚನಾ ಸಭೆಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಬೀರಲಿಂಗಪ್ಪ, ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಾಗಮ್ಮ ಅವರ ಪುತ್ರ ಗಣೇಶ್, ಉಪಾಧ್ಯಕ್ಷ ಶ್ರೀ ಮಹಾಂತೇಶ್, ಊರಿನ ಗಣ್ಯರಾದ ಗಿರೀಶ್, ಹೊಸಕೋಟೆ ಜಗದೀಶ್, ಚಿದಾನಂದಪ್ಪ, ಜಡೆಗೌಡ್ರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದೇ ವೇಳೆ ಸಂಸ್ಥೆಯ ಕೃಷಿ ಅಧಿಕಾರಿಗಳಾದ ಸಂಜುಕುಮಾರ್, ವಲಯದ ಮೇಲ್ವಿಚಾರಕರಾದ ಅವಿನಾಶ್, ಸೇವಾಪ್ರತಿನಿಧಿಗಳಾದ ವಿಶಾಲಾಕ್ಷಿ ಹಾಗೂ ಉಷಾ, ರೈತ ಬಾಂಧವರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
