ಶೌಚಾಲಯ ಶೋಚನೀಯ, ಬಯಲಲ್ಲೇ ಬಹಿರ್ದೆಸೆ!
ಕಂಪ್ಲಿ:
ಸ್ವಚ್ಛ ಭಾರತ ನಿರ್ಮಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಾನಾ ಹೆಸರುಗಳಲ್ಲಿ ನೂರಾರು ಯೋಜನೆಗಳನ್ನು ಘೋಷಿಸಿವೆ. ಆದರೂ, ನಗರ ಪ್ರದೇಶಗಳಲ್ಲೇ ಸ್ವಚ್ಛತೆ ಮರೀಚಿಕೆಯಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಟ್ಟಿದ ಶೌಚಾಲಯಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ಬಯಲು ಬಹಿರ್ದೆಸೆ ಪ್ರವೃತ್ತಿ ಮುಂದುವರಿದು, ನಗರದಲ್ಲಿ ಏಲಕ್ಕಿ ಕಂಪು ಮಾಯವಾಗಿದೆ. ಶೌಚಾಲಯಗಳ ಸ್ಥಿತಿಗತಿ, ಮಹಿಳೆಯರ ಸಮಸ್ಯೆಗಳು ಸೇರಿದಂತೆ ಹತ್ತು–ಹಲವು ಅಂಶಗಳ ಮೇಲೆ ‘ನಮ್ಮ ನಗರ ನಮ್ಮ ಧ್ವನಿ’ ಬೆಳಕು ಚೆಲ್ಲಿದೆ.
ಕಂಪ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳನ್ನು ಬಯಲು ಶೌಚ ಮುಕ್ತವನ್ನಾಗಿಸುವ ಉದ್ದೇಶದಿಂದ ಸರಕಾರ ಶೌಚಾಲಯ ನಿರ್ಮಾಣಕ್ಕಾಗಿ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ. ಅದರೆ ಪಟ್ಟಣ ಸೇರಿದಂತೆ ಪ್ರತಿಯೊಂದು ಹಳ್ಳಿಗಳಲ್ಲಿಯೂ ಬೆಳಗಾಗುತ್ತಿದ್ದಂತೆಯೇ ಕೈಯಲ್ಲಿ ಚೊಂಬು ಹಿಡಿದು ಬಯಲು ಹುಡುಕುತ್ತಾ ಹೋಗುತ್ತಿರುವುದನ್ನು ಇಂದಿಗೂ ಕಾಣಬಹುದಾಗಿದೆ...!
ತಾಲೂಕಿನ ನಗರ ಪ್ರದೇಶಗಳಲ್ಲಿನ ಪ್ರತಿಯೊಂದು ರಸ್ತೆ ಬದಿ ಜನರು ಬಹಿರ್ದೆಸೆಗೆ ಹೋಗುತ್ತಿರುವುದರಿಂದ ಗ್ರಾಮಗಳ ಹತ್ತಿರದ ರಸ್ತೆಗಳಲ್ಲಿ ಜನತೆ ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾದ ದುರ್ಭರ ಸ್ಥಿತಿ ಇಂದಿಗೂ ಇದೆ.
ಸಂಕೋಚ ಸ್ವಭಾವ, ಮಡಿವಂತಿಕೆ: ಬಯಲಿನಲ್ಲಿ ಮಲವಿಸರ್ಜನೆ ಮಾಡುವುದನ್ನು ತಪ್ಪಿಸುವದರೊಂದಿಗೆ, ಜನತೆಯಲ್ಲಿ ಸುರಕ್ಷಿತ ಮತ್ತು ಸ್ವಚ್ಛತೆಯ ಅಭ್ಯಾಸವನ್ನು ಬೆಳೆಸುವ ಉದ್ದೇಶದಿಂದ ಸರಕಾರ ನಿರ್ಮಲ ಗ್ರಾಮ, ಸ್ವಚ್ಛ ಗ್ರಾಮ, ಸುವರ್ಣ ಗ್ರಾಮ ಹೀಗೆ ಹಲವಾರು ಯೋಜನೆಯನ್ನು ಜಾರಿಗೆ ತಂದಿದೆಯಾದರೂ ಗ್ರಾಮೀಣ ಪ್ರದೇಶಗಳಲ್ಲಿ ಜನರು ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದಕ್ಕೆ ಜನತೆಯಲ್ಲಿಯ ಸಂಕೋಚ ಸ್ವಭಾವ ಹಾಗೂ ಮಡಿವಂತಿಕೆ ಮುಖ್ಯ ಕಾರಣವಾಗಿದೆ.
ವರದಿ : ಚನ್ನಕೇಶವ