ಕೊಪ್ಪಳ,: ಆದಿ ಹಳೆಯ ಶಿಲಾಯುಗದ ಸಂಸ್ಕೃತಿ ಕಾಲದ ಮಾನವನ ನೆಲೆಯಾಗಿದ್ದ ಪ್ರದೇಶ ಎಂದೇ ಇತಿಹಾಸಕಾರರು ಗುರುತಿಸಿದ, ಜಿಲ್ಲೆಯ ಪವನ ವಿದ್ಯುತ್ ಕೇಂದ್ರದ ಪ್ರಮುಖ ಸ್ಥಳವಾದ ಬಿಸಿಲ ನಾಡು ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ಎರಡು ದಿನಗಳ ಕೊಪ್ಪಳ ಜಿಲ್ಲಾ ಅಕ್ಷರ ಜಾತ್ರೆಗೆ ರವಿವಾರ
ಚಾಲನೆ ಸಿಕ್ಕಿತು.
ಕೊಪ್ಪಳ ಜಿಲ್ಲೆಯ ಹಿರಿಯ ಸಾಹಿತಿ, ಕುಕನೂರಿನ ಡಾ.ಉದಯಶಂಕರ ಪುರಾಣಕ ಅವರ ಸರ್ವಾಧ್ಯಕ್ಷತೆಯಲ್ಲಿ ಹನುಮಸಾಗರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭಕ್ಕೆ ಜಿಲ್ಲೆಯ ಸಾಹಿತಿಗಳು, ಕಲಾವಿದರು, ಶಿಕ್ಷಕರು, ಸಾಹಿತ್ಯಾಭಿಮಾನಿಗಳು ಹಾಗೂ ಇನ್ನು ಅನೇಕರು ಸಾಕ್ಷಿಯಾದರು.
ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ ಬಿ.ರಂಗಸ್ವಾಮಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತಾಂತ್ರಿಕ ಶಿಕ್ಷಣವನ್ನು ಮಾತೃಭಾಷೆ ಕನ್ನಡದಲ್ಲಿಯೇ ಪಡೆಯುವಂತಾಗಲಿ ಎಂದು ಅಭಿಪ್ರಾಯಪಟ್ಟರು.
ಕನ್ನಡದಲ್ಲಿಯೇ ತಾಂತ್ರಿಕ ಶಿಕ್ಷಣ ಕಲಿಸಬೇಕು ಎಂಬುದು ಎರಡು ವರ್ಷಗಳ ನಮ್ಮ ವಿಶ್ವವಿದ್ಯಾಲಯದ ಪ್ರಯತ್ನವಾಗಿತ್ತು. ಇದಕ್ಕೆ ಮೂರು ಕಾಲೇಜುಗಳು ಮುಂದೆ ಬಂದಿದ್ದು, ಈ ಕಾಲೇಜುಗಳಲ್ಲಿ 30 ವಿದ್ಯಾರ್ಥಿಗಳಿಗೆ ಮೆಕ್ಯಾನಿಕಲ್ ಮತ್ತು ಸಿವಿಲ್ ಶಿಕ್ಷಣವನ್ನು ಕನ್ನಡದಲ್ಲಿ ನೀಡಲು ಯೋಚಿಸಲಾಗಿತ್ತು. ಇದಕ್ಕಾಗಿ ಒಂದು ಮತ್ತು ಎರಡನೇ ಸೆಮಿಸ್ಟರ್ ಪಠ್ಯಕ್ರಮವನ್ನು ಸಹ ಸಿದ್ಧಪಡಿಸಲಾಗಿತ್ತು. ಕಳೆದ ಬಾರಿ 15 ವಿದ್ಯಾರ್ಥಿಗಳು ಆಸಕ್ತಿ ವಹಿಸಿದ್ದರು. ಆದರೆ, ಈ ಬಾರಿ ಯಾರೂ ಆಸಕ್ತಿ ತೋರಿಸುತ್ತಿಲ್ಲ. ಈ ನಿಟ್ಟಿನಲ್ಲಿ ಮಕ್ಕಳು ಮುಂದೆ ಬರಲು ಕನ್ನಡದಲ್ಲಿ ತಾಂತ್ರಿಕ ಶಿಕ್ಷಣ ಪಡೆದವರಿಗೆ ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ಘೋಷಣೆಯಾಗಬೇಕು ಎಂದು ಒತ್ತಾಯಿಸಿದರು.
ಕನ್ನಡ ಪ್ರೀತಿಯನು ಇಟ್ಟುಕೊಂಡರಷ್ಟೇ ಸಾಲದು, ಅದನ್ನು ಬೆಳೆಸಬೇಕು. ಕನ್ನಡಾಭಿಮಾನ ಬೆಳೆಸಿಕೊಳ್ಳಲು ಬೇರೆ ತರಹದ ವ್ಯಾಮೋಹ ಬೇಕಾಗಿಲ್ಲ. ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದು ಸಾಹಿತಿಗಳು, ಕನ್ನಡಾಭಿಮಾನಿಗಳು, ಕನ್ನಡಪರ ಸಂಘಟನೆಗಳು ಹೋರಾಟ ಮಾಡುತ್ತವೆ. ಸರ್ಕಾರವೂ ಸಹ ಆದೇಶ ಮಾಡುತ್ತದೆ. ಆದರೆ ಅದನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಎಲ್ಲರೂ ಶ್ರಮೀಸಬೇಕು. ಕನ್ನಡಾಭಿಮಾನ ಹೆಚ್ಚು ಪ್ರಸಾರ ಮಾಡಬೇಕು. ಕನ್ನಡ ಹಬ್ಬವನ್ನು ನಮ್ಮ ಹಬ್ಬ ಎಂದು ಭಾವಿಸಿ ಸಂಭ್ರಮ, ಸಡಗರದಿಂದ ಆಚರಿಸಬೇಕು. ಹೊಸ ಬಟ್ಟೆ ತೊಟ್ಟು ಆಚರಿಸುವ ರೂಢಿ ಮಾಡಿಕೊಳ್ಳಬೇಕು ಎಂದರು.
ಸ್ವಾಗತ ಸಮಿತಿಯ ಅಧ್ಯಕ್ಷರು ಹಾಗೂ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಮಾತನಾಡಿ, ಮೈಸೂರು ರಾಜಮನೆತನದ ಕೃಷ್ಣರಾಜ ಒಡೆಯರು ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ಸಾಹಿತ್ಯ, ಇತಿಹಾಸ, ಕನ್ನಡಕ್ಕಾಗಿ ಶ್ರಮಿಸಿದ ಸಾಹಿತಿ, ಕವಿಗಳ ಕೊಡುಗೆ ಮೆಲಕು ಹಾಕಲು ಸಮ್ಮೇಳನಗಳು ಸಹಕಾರಿ ಆಗಲಿವೆ. ಜಿಲ್ಲೆಯ ಎಲ್ಲ ಸಾಹಿತ್ಯಾಸಕ್ತರು, ಯುವಕರು ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಆಸಕ್ತಿ ತೋರಬೇಕು.
ಮಕ್ಕಳಿಗೆ ದಿನನಿತ್ಯ ಪಾಠ ಮಾಡುವ ಶಿಕ್ಷಕ ವೃಂದವು ಇಂತಹ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗಿಯಾಗಬೇಕು. ದಿನನಿತ್ಯದ ಪಾಠ ಬೋಧನೆ ಮಾಡಲು ಹೆಚ್ಚಿನ ವಿಷಯಗಳು ಇಂತಹ ಸಮ್ಮೇಳನದ ಮೂಲಕ ಲಭಿಸುತ್ತವೆ. ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿವೆ. ಇದು ಕನ್ನಡಿಗರಾದ ನಮಗೆ ಅಭಿಮಾನದ ಸಂಗತಿಯಾಗಿದೆ ಎಂದರು.
ಸಮಾರಂಭದಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಟಿ.ವಿ ಮ್ಯಾಗಳದ ಹಾಗೂ ಕೊಪ್ಪಳ ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೋಲಿಸ್ ಪಾಟೀಲ್ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಹನುಮಸಾಗರ ಗ್ರಾಮ ಪಂಚಾಯತ್ ಅಧ್ಯಕ್ಷ ಶಂಕ್ರಮ್ಮ ನಿರ್ವಾಣಿ, ಗ್ರಾಪಂ ಉಪಾಧ್ಯಕ್ಷ ಮಂಜುನಾಥ ಹುಲ್ಲೂರು, ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಸಾವಿತ್ರಿ ಮುಜಮದಾರ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶೇಖರಗೌಡ ಪೊಲೀಸ್ ಪಾಟೀಲ್, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ ಸೇರಿದಂತೆ ಹಲವು ಗಣ್ಯರು, ಕಸಾಪ ಪದಾಧಿಕಾರಿಗಳು ಇದ್ದರು.