ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಯ ಮರುವನಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಕನ್ನಂಬಾಡಿ ಅಮ್ಮನವರ ಮೆರವಣಿಗೆ ಹಾಗೂ ಪೂಜಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.
ಮಂಗಳವಾರ ಸಂಜೆ ಅಲಂಕೃತಗೊಂಡ ಕನ್ನಂಬಾಡಿ ಅಮ್ಮನವರ ಮೂರ್ತಿಯನ್ನು ಗ್ರಾಮದ ಎಲ್ಲಾ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಗ್ರಾಮದ ಹೊರವಲಯದಲ್ಲಿರುವ ಕನ್ನಂಬಾಡಮ್ಮನ ದೇವಾಲಯದ ಬಳಿಗೆ ಗ್ರಾಮದ ಮಹಿಳೆಯರು ಪ್ರಸಾದ ಮತ್ತು ನೈವೇದ್ಯಕ್ಕೆ ಅರಿಶಿನ ಕುಂಕುಮ ಧರಿಸಿ ಬೇವು ಮತ್ತು ಮಾವಿನ ಸೊಪ್ಪಿನೊಂದಿಗೆ ಅಲಂಕರಿಸಿ ತಲೆಯ ಮೇಲೆ ಹೊತ್ತು ಸಾಗಿದರು.
ಕನ್ನಂಬಾಡಮ್ಮನ ಪೂಜೆಯ ಹಿನ್ನೆಲೆ.
ನೂರಾರು ವರ್ಷಗಳ ಹಿಂದೆ ಗ್ರಾಮಕ್ಕೆ ಪ್ಲೇಗ್, ಸಿಡುಬು, ಸೀತಾಳ, ದಡಾರ ಸೇರಿದಂತೆ ಹಲವು ಮಾರಣಾಂತಿಕ ರೋಗಗಳಿಂದ ನರಳುತ್ತಿದ್ದ ಜನರು ತಮ್ಮ ಮಕ್ಕಳ ಹಾಗೂ ತಮ್ಮ ಜಾನುವಾರುಗಳ ರಕ್ಷಣೆಗೆ ಮಾರಮ್ಮ, ಕನ್ನಂಬಾಡಮ್ಮ ಸೇರಿದಂತೆ ಒಂಭತ್ತು ದೇವಿಯ ರಕ್ಷಣೆ ಪಡೆಯುವ ಮೂಲಕ ಅವುಗಳನ್ನು ಆರಾಧಿಸುವ ಪರಿಪಾಠ ಬೆಳೆಸಿಕೊಂಡಿದ್ದರು. ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಆ ದೇವತೆಗಳನ್ನು ಪೂಜಿಸಿ ಆರಾಧಿಸುವ ಮೂಲಕ ಗ್ರಾಮದ ರಕ್ಷಣೆ, ಗ್ರಾಮಸ್ಥರ ಆರೋಗ್ಯ, ಜಾನುವಾರುಗಳ ಸಂರಕ್ಷಣೆಗಾಗಿ ಪ್ರಾರ್ಥಿಸಿ ಈ ದೇವತೆಗಳನ್ನು ಪೂಜಿಸುತ್ತಾರೆ.
ಹಬ್ಬದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ತಳಿರು ತೋರಣಗಳನ್ನು ಕಟ್ಟಿ ಹಾಗೂ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಮೆರವಣಿಗೆಯ ನಂತರ ಕನ್ನಂಬಾಡಿ ಅಮ್ಮನ ದೇವಾಲಯದ ಮುಂಭಾಗ ಮಹಿಳೆಯರು ಸಾಲಾಗಿ ಕುಳಿತು ಅಮ್ಮನಿಗೆ ತಾವು ತಂದಿದ್ದ ಗಂಧದಕಡ್ಡಿ, ಕರ್ಪೂರ, ಹಣ್ಣು, ಕಾಯಿ, ಹೂವು, ಹಾರ, ನೈವೇದ್ಯ ಮುಂತಾದುವುಗಳನ್ನು ಸಮರ್ಪಿಸಿ ಭಕ್ತಿಯಿಂದ ಗ್ರಾಮದ ಸರ್ವರನ್ನೂ ಹಾಗೂ ಜಾನುವಾರುಗಳನ್ನು ಸಂರಕ್ಷಿಸುವಂತೆ ಬೇಡಿಕೊಳ್ಳುತ್ತಾರೆ.
ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ