ಕೊಪ್ಪಳ,: ರೈತರಿಂದಲೇ ನೇರವಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮಾವಿನ ಹಣ್ಣುಗಳ ಮಾರಾಟಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಮೇ 23ರಿಂದ ಮೇ 31ರವರೆಗೆ ನಗರದ ತೋಟಗಾರಿಕೆ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾದ ''ಕೊಪ್ಪಳ ಮಾವು ಮೇಳ-2023ರ ಉದ್ಘಾಟನಾ ಕಾರ್ಯಕ್ರಮ ಮಂಗಳವಾರ ಜರುಗಿತು.
ಮಾವು ಮೇಳಕ್ಕೆ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ರಿಬ್ಬನ್ ಕತ್ತರಿಸುವುದರ ಮೂಲಕ ಚಾಲನೆ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ ಕಡಿ, ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್., ಪಶುಇಲಾಖೆ ಉಪ ನಿರ್ದೇಶಕರಾದ ಡಾ. ಹೆಚ್.ನಾಗರಾಜ, ತೋಟಗಾರಿಕೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಸೇರಿದಂತೆ ಹಲವು ಗಣ್ಯರು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ತೋಟಗಾರಿಕಾ ಇಲಾಖೆಯ ಆವರಣದ ಮಾವು ಮೇಳದಲ್ಲಿನ ವಿವಿಧ ಬಗೆಯ ಹಣ್ಣುಗಳನ್ನು ಹಾಗೂ ಅವುಗಳ ಉತ್ಪನ್ನಗಳ ವೀಕ್ಷಣೆ ಮಾಡಿ ಮಾವಿನ ರುಚಿ ಸವಿದರು.
ರೈತರಿಂದ ನೋಂದಣಿ : ಮೇಳದಲ್ಲಿ ಭಾಗವಹಿಸಲು 51ಕ್ಕೂ ಹೆಚ್ಚಿನ ರೈತರು ನೋಂದಾಯಿಸಿದ್ದು, ರೈತರಿಗಾಗಿ ಉಚಿತವಾಗಿ 22ಕ್ಕೂ ಹೆಚ್ಚಿನ ಸ್ಟಾಲ್ ಗಳನ್ನು ನಿರ್ಮಿಸಿ ಕೊಡಲಾಗಿದೆ ಮತ್ತು ಪ್ರದರ್ಶನದಲ್ಲಿ 100ಕ್ಕೂ ಹೆಚ್ಚಿನ ದೇಶಿ ಮತ್ತು ವಿದೇಶಿ ಮಾವಿನ ತಳಿಗಳನ್ನು ಸುಸಜ್ಜಿತವಾಗಿ ಪ್ರದರ್ಶನದಲ್ಲಿ ಇಡಲಾಗಿದೆ. 10ಕ್ಕೂ ಹೆಚ್ಚಿನ ತೋಟಗಾರಿಕೆ ರೈತ ಉತ್ಪಾದಕ ಕಂಪನಿಗಳಲ್ಲದೇ ಜಿಲ್ಲಾ ಹಾಪಕಾಮ್ಸ್ ಸಂಸ್ಥೆಗಳಿಗೆ ಮಾವಿನ ಹಣ್ಣು ಮಾರಾಟ ಮಾಡಲು ಸ್ಟಾಲ್‌ಗಳ ವ್ಯವಸ್ಥೆ ಮಾಡಲಾಗಿದೆ. ರೈತ ಉತ್ಪಾದಕ ಕಂಪನಿಗಳು ಹಾಗೂ ಜಿಲ್ಲಾ ಹಾಪಕಾಮ್ಸ್ ಕೊಪ್ಪಳದ ನೂರಾರು ಸದಸ್ಯ ರೈತರಿಂದ ಮಾವಿನ ಹಣ್ಣುಗಳನ್ನು ಖರೀದಿಸಿ ಈ ಮೇಳದಲ್ಲಿ ಮಾರಾಟ ಮಾಡುವುದರಿಂದ ಈ ಮೇಳದಲ್ಲಿ ನೇರವಾಗಿ ಭಾಗವಹಿಸಿದ ರೈತರಿಗೂ ಅನುಕೂಲವಾಗಿ ಯೋಗ್ಯ ಬೆಲೆ ಸಿಗುವಂತಾಗಿದೆ ಎಂದು ತೋಟಗಾರಿಕಾ ಇಲಾಖಾ ಅಧಿಕಾರಿಗಳು ಇದೆ ವೇಳೆ ಮಾಹಿತಿ ನೀಡಿದರು.
ಗಮನ ಸೆಳೆದ ದುಬಾರಿ ಮಾವು : ಜಗತ್ತಿನ ಅತ್ಯಂತ ದುಬಾರಿ ಹಣ್ಣಾದ "ಮೀಯಾ ಜಾಕಿ" ಎಂಬ ಜಪಾನ ತಳಿಯನ್ನು ಪ್ರದರ್ಶನಕ್ಕೆ ಇಡಲಾಗಿದೆ. ಜೊತೆಗೆ ಮೇಳದಲ್ಲಿ ಕೇಸರ್, ಬೆನೆಶಾನ್, ದಶಹರಿ, ರಸಮರಿ, ಸ್ವರ್ಣರೇಖಾ, ಇಮಾಮ ಪಸಂಧ ಆಪೋಸು, ಮಲ್ಲಿಕಾ, ತೋತಾಪೂರಿ, ಪುನಾಸ್ ಸೇರಿದಂತೆ
100ಕ್ಕೂ ಅಧಿಕ ವಿವಿಧ ತಳಿಯ ಮಾವಿನ ಹಣ್ಣುಗಳು ಪುನಾಸ್ ಮತ್ತು ಮಂಡಪ್ಪ ಉಪ್ಪಿನಕಾಯಿ ತಳಿಯ ಮಾವು, ಉಪ ಉತ್ಪನ್ನಗಳು ಹಾಗೂ ಮೌಲ್ಯವರ್ಧಿತ ಉತ್ಪನ್ನಗಳನ್ನು ಸಹ ಪ್ರದರ್ಶನದಲ್ಲಿ ಇಡಲಾಗಿದೆ. ತೋಟಗಾರಿಕೆ ಕ್ಷೇತ್ರದಲ್ಲಿ ಬೆಳೆದ ಮಾವಿನ ವಿವಿಧ ತಳಿಗಳನ್ನು ಸಹ ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ.
ಮೌಲ್ಯವರ್ಧಿತ ಉತ್ಪನ್ನಗಳು, ತಯಾರಿಕೆ ವಿಧಾನ : ಮೇಳದಲ್ಲಿ ಮೊದಲ ಬಾರಿಗೆ ಮೌಲ್ಯವರ್ಧಿತ ಉತ್ಪನ್ನಗಳಾದ ಮ್ಯಾಂಗೋ ರೋಲ್, ಮ್ಯಾಂಗೋ, ಸ್ಪೈಷ್, ಮಾವಿನ ಪಲ್ಪ, ಮಾವಿನ ಸಿಖಂಡ ಹಾಗೂ ಇತರೇ ಉತ್ಪನ್ನಗಳನ್ನು ಸಹ ಮಾರಾಟಕ್ಕೆ ಇಡಲಾಗಿದೆ. ಮೌಲ್ಯವರ್ಧಿತ ಉತ್ಪನ್ನಗಳನ್ನು ಹೇಗೆ ತಯಾರಿಸಬಹುದು ಎಂಬ ಬಗ್ಗೆ ಸಹ ತಿಳಿಸಿ ಕೊಡಲಾಗುತ್ತಿದೆ.
ಕೊಪ್ಪಳ ಕೇಸರ್ ಮಾವು : ಬ್ಯಾಂಡ್ ಬಾಕ್ಸ್‌ನಲ್ಲಿನ ಕೊಪ್ಪಳ ಕೇಸರ್ ಮಾವಿನ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಸಾರ್ವಜನಿಕರಿಗೆ ಬಾಕ್ಸ್‌ನಲ್ಲಿನ ಹಣ್ಣುಗಳನ್ನು ಸಿಗುವಂತೆ ಅನುಕೂಲ ಮಾಡಲಾಗಿದೆ. ಈ ಬಾರಿ ಮೇಳವನ್ನು ಪ್ಲಾಸ್ಟಿಕ್ ಮುಕ್ತವಾಗಿಡುವ ಉದ್ದೇಶದಿಂದ ಸಾರ್ವಜನಿಕರಿಗೆ ಹಣ್ಣುಗಳನ್ನು ತೆಗೆದುಕೊಂಡು ಹೋಗಲು ಅನುಕೂಲವಾಗುವಂತೆ ಇಲಾಖೆಯಿಂದ ಪೇಪರ್ ಬ್ಯಾಗ್ ನೀಡಲಾಗಿದೆ. ಇದರಿಂದ ಕೊಪ್ಪಳ ಕೇಸರ್ ಹೆಚ್ಚು ಜನಪ್ರಿಯವಾಗಿದೆ. ಮಾವಿನ ಹಣ್ಣುಗಳಲ್ಲಿ ಲಭ್ಯವಿರುವ ಪೋಷಕಾಂಶಗಳು, ಖನಿಜಗಳು ಮತ್ತು ಅವುಗಳ ಆರೋಗ್ಯದ ಬಗ್ಗೆ ತಿಳಿಸುವ ಬ್ಯಾನರ್‌ಗಳನ್ನು ಸಹ ಪ್ರದರ್ಶಿಸಿ ಮಾಹಿತಿ ನೀಡಲಾಗುತ್ತಿದೆ.
ಸೆಲ್ಸಿ ಪಾಯಿಂಟ್ : ಮೇಳದಲ್ಲಿ ಮಕ್ಕಳು ಮತ್ತು ಸಾರ್ವಜನಿಕರಿಗೆ ಸೆಲ್ಫಿ ಪಾಯಿಂಟ್ ನಿರ್ಮಿಸಲಾಗಿದೆ. ಈ ಸೆಲ್ಸಿ ಪಾಯಿಂಟ್ ಮಾವಿನ ಮಾದರಿ ಹೊಂದಿ ಜನರನ್ನು ಆಕರ್ಷಿಸಿಸುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ವಿವಿಧ ಮಾವಿನ ತಳಿಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಮೇ 23 ರಿಂದ ಮೇ 31ರವರೆಗೆ 10 ದಿನಗಳ ಕಾಲ ತೋಟಗಾರಿಕಾ ಇಲಾಖಾ ಆವರಣದಲ್ಲಿ ಮಾವು ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ 12ಕ್ಕೂ ಹೆಚ್ಚಿನ ಮಾವಿನ ತಳಿಗಳನ್ನು ರೈತರು ನೇರವಾಗಿ ಮಾರಾಟ ಮಾಡಲು ಅನುಕೂಲ ಕಲ್ಪಿಸಲಾಗಿದೆ. ಸಾರ್ವಜನಿಕರು ಮಾವು ಮೇಳದಲ್ಲಿ ಭಾಗವಹಿಸಿ ರೈತರ ಆದಾಯ ಹೆಚ್ಚಿಸಬೇಕೆಂದು ತೋಟಗಾರಿಕೆ ಉಪ ನಿರ್ದೇಶಕರಾದ ಕೃಷ್ಣ ಉಕ್ಕುಂದ ಅವರು ತಿಳಿಸಿದ್ದಾರೆ.