ಬಳ್ಳಾರಿ : ನೂತನ ಜಿಲ್ಲಾಧಿಕಾರಿಯಾಗಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಭಾನುವಾರ ಅಧಿಕಾರವಹಿಸಿಕೊಂಡಿದ್ದು, ಕಳೆದ ಒಂದು ವಾರದಿಂದ ಆಗಿದ್ದ ಗೊಂದಲಕ್ಕೆ ತೆರೆ ಎಳೆದಂತಾಗಿದೆ.
ಪ್ರಶಾಂತ್‌ಕುಮಾರ್ ಮಿಶ್ರಾ ಅವರು 2014 ರ ಬ್ಯಾಚ್‌ನ ಐಎಎಸ್ ಅಧಿಕಾರಿ. ಈ ಹಿಂದೆ ಕೆಎಸ್‌ಆರ್‌ಟಿಸಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಬಳ್ಳಾರಿ ನೂತನ ಡಿಸಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದಕ್ಕೂ ಮೊದಲು ಪವನ್ ಕುಮಾರ್ ಮಾಲಪಾಟಿ ಅವರು ಜಿಲ್ಲಾಧಿಕಾರಿಯಾಗಿದ್ದರು. ಅವರನ್ನು ಜು.17ರಂದು ಸರ್ಕಾರ ವರ್ಗಾವಣೆ ಮಾಡಿ, ಅವರ ಜಾಗಕ್ಕೆ ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿತ್ತು.
ಆದರೆ ವೆಂಕಟೇಶ್ ಅವರನ್ನು ಡಿಸಿಯನ್ನಾಗಿ ನೇಮಿಸಿದ ಬೆನ್ನಲ್ಲೇ ಜಿಲ್ಲೆಯ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರಿಂದಾಗಿ ವೆಂಕಟೇಶ್ ಅವರನ್ನು ಅಧಿಕಾರ ಸ್ವೀಕರಿಸದಂತೆ ಸರ್ಕಾರ ಮೌಖಿಕವಾಗಿ ತಿಳಿಸಿತ್ತು. ನಂತರ ಜು.21ರಂದು ಅಧಿಕೃತವಾಗಿ ಆದೇಶವನ್ನು ಸರ್ಕಾರ ಆದೇಶ ತಡೆಹಿಡಿತ್ತು. ವೆಂಕಟೇಶ್ ಅವರ ನೇಮಕದ ಸಂಡೂರು ಶಾಸಕ ಈ.ತುಕಾರಾಮ್ ಸೇರಿದಂತೆ ನಾಲ್ವರು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು.
ಅದರಿಂದಾಗಿ ವೆಂಕಟೇಶ್ ಪರ-ವಿರೋಧಗಳು ವ್ಯಕ್ತಗೊಂಡ ಹಿನ್ನೆಲೆಯಲ್ಲಿ ನೂತನ ಡಿಸಿಯನ್ನಗಿ ಪ್ರಶಾಂತ್ ಕುಮಾರ್ ಅವರನ್ನು ನೇಮಿಸಿ ಗೊಂದಲವನ್ನು ಇತ್ಯಾರ್ಥಗೊಳಿಸಿದೆ.
