ಕಂಪ್ಲಿ. :ಇಲ್ಲಿನ ಕೋಟೆಗೆ ತೆರಳುವ ಹಾದಿಯಲ್ಲಿನ ಬೆನಕನ ಕಾಲುವೆ ಎದುರಿಗೆ ಮಹಾಸತಿ ಕಲ್ಲು ಪತ್ತೆಯಾಗಿದೆ. ಮಹಾಸತಿ ಕಲ್ಲನ್ನು ಸಂರಕ್ಷಿಸುವಲ್ಲಿ ಪುರಸಭೆ ಆಡಳಿತ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದು ವಿಜಯನಗರ ಕಾಲದ ಮಹಾಸತಿಕಲ್ಲಾಗಿದ್ದು, ಮಹಾಸತಿಯನ್ನು ಪ್ರಧಾನವಾಗಿ ಚಿತ್ರಿಸಿದೆ. ವೀರ(ಪತಿ)ನ ಚಿತ್ರ ಚಿಕ್ಕದಿರುವುದರಿಂದ ಸತಿಯ ಅನುಗಮನದ ಸಂಕೇತವಾಗಿದ್ದು, ಪತಿ ಮರಣ ನಂತರ ಪತಿಯ ಸ್ಮರಣೆಗಾಗಿ ಯಾವುದಾದರೊಂದು ವಸ್ತು ಹಿಡಿದು ಏಕಾಂಗಿಯಾಗಿ ಆತ್ಮಾರ್ಪಣೆಗೊಂಡಿರಬಹುದು. ಇದು ಒಳ್ಳೆ ಪ್ರಕಾರದ ಅಪರೂಪದ ಮಹಾಸತಿ ಕಲ್ಲಾಗಿದೆ. ದೇವಸ್ಥಾನದಲ್ಲಿ ಅಥವಾ ಕೋಟೆ ಮಹಾದ್ವಾರ ಬಳಿ ಸಂರಕ್ಷಿಸಬೇಕಿದೆ ಎಂದು ಗಂಗಾವತಿಯ ಸಂಶೋಧಕ ಶರಣಬಸಪ್ಪ ಕೋಲ್ಕಾರ ತಿಳಿಸಿದ್ದಾರೆ. ಮಹಾಸತಿ ಕಲ್ಲು ಇತಿಹಾಸ ಪರಂಪರೆಯನ್ನು ಬಿಂಬಿಸುತ್ತಿದ್ದು ಇದನ್ನು ಸಂರಕ್ಷಿಸಬೇಕಿದೆ. ಕೆಲ ವರ್ಷಗಳ ಕೆಳಗೆ ಗೋಚರಿಸಿದ್ದ ಈ ಮಹಾಸತಿ ಕಲ್ಲನ್ನು ಸಂರಕ್ಷಿಸದಿದ್ದರಿಂದ ಮತ್ತೇ ನೆಲದಲ್ಲಿ ಹೂತು ಹೋಗಿದೆ. ಶಾತವಾಹನರ ಕಂಪನಿ ನೀರು ಒಯ್ಯುವ ಪೈಪು ದುರಸ್ತಿಗಾಗಿ ನೆಲ ಅಗೆದಾಗ ದೊರೆತಿದೆ. ಇದನ್ನು ಸಂರಕ್ಷಿಸುವಲ್ಲಿ ಪುರಸಭೆ ಆಡಳಿತ ಮುಂದಾಗಬೇಕು ಎಂದು ಕನ್ನಡ ಹಿತರಕ್ಷಕ ಸಂಘದ ಗೌರವ ಅಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ, ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ ಮತ್ತಿತರರು ಒತ್ತಾಯಿಸಿದ್ದಾರೆ.