ಹು-ಧಾ ಜಿಲ್ಲಾ ಬಿಜೆಪಿ ಅಧ್ಯಕ್ಷಗಿರಿಗೆ ಹೆಚ್ಚಿದ ಪೈಪೋಟಿ
ಐವರು ಆಕಾಂಕ್ಷಿಗಳ ಪೈಕಿ ದತ್ತಮೂರ್ತಿ ಕುಲಕರ್ಣಿ ರೇಸ್‍ನಲ್ಲಿ ಮೂಂಚೂಣಿ
ವಿಧಾನಸಭೆ ಚುನಾವಣೆಯ ಸೋಲಿನ ಹತಾಶೆ ನಂತರ ಉತ್ಸಾಹಿ ಯುವ ನಾಯಕ ಬಿ.ವೈ ವಿಜಯೇಂದ್ರ ಅವರು ರಾಜ್ಯದ ಬಿಜೆಪಿಯ ನೂತನ ಸಾರಥಿಯಾಗುತ್ತಿದ್ದಂತೆ ಕಳಾಹೀನಗೊಂಡಿದ್ದ ರಾಜ್ಯ ಬಿಜೆಪಿ ಪಾಳೆಯದಲ್ಲೀಗ ನವಸಂಚಲನ ಸೃಷ್ಟಿಯಾಗಿದೆ. ಇತ್ತೀಚಿಗಷ್ಟೇ ನೂತನ ಬಿಜೆಪಿ ರಾಜ್ಯಾಧ್ಯಕ್ಷರ ತಂಡಕ್ಕೆ ಮತ್ತೆ ಹೊಸ ಪದಾಧಿಕಾರಿಗಳು ನೇಮಕಗೊಂಡಿರುವ ಬೆನ್ನಲ್ಲೇ ಪ್ರತಿ ಜಿಲ್ಲೆಯ ಬಿಜೆಪಿ ಅಧ್ಯಕ್ಷರಗಳನ್ನು ಆಯ್ಕೆಗೊಳಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ.
ಬಿಜೆಪಿಯ ನೂತನ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕಗೊಳಿಸುವ ಸಂಬಂಧ ಈಗಾಗಲೇ ಬಿ.ವೈ.ವಿ ಪಡೆಯಿಂದ 60 ಮಂದಿಯ ತಂಡ ರಚಿಸಿದ್ದು , 2 ದಿನಗಳವರೆಗೆ ಪ್ರವಾಸ ನಡೆಸುವ ಈ ತಂಡ ಹಾಲಿ ಜಿಲ್ಲಾಧ್ಯಕ್ಷರು , ಕಾರ್ಯಕರ್ತರು , ಸಂಸದರು , ಶಾಸಕರು , ಮಾಜಿ ಶಾಸಕರು ಹಾಗೂ ಪಕ್ಷದ ಹಿರಿಯರ ಅಭಿಪ್ರಾಯ ಸಂಗ್ರಹಿಸಿ 2-3 ದಿನಗಳಲ್ಲಿ ತನ್ನ ಕಾರ್ಯಪೂರ್ಣಗೊಳಿಸಿ ವರದಿ ನೀಡಲಿದೆ.
ಈ ಪ್ರಕ್ರಿಯೆಗೆ ಅನುಗುಣವಾಗಿ ಹುಬ್ಬಳ್ಳಿ -ಧಾರವಾಡ ಮಹಾನಗರ ಜಿಲ್ಲೆಯ ಅಧ್ಯಕ್ಷ ಸ್ಥಾನಕ್ಕೇರಲು ಹಲವು ದಿನಗಳಿಂದ ಪಕ್ಷದ ಅನೇಕ ಪ್ರಮುಖರು ತೆರೆಮರೆಯಲ್ಲಿ ಹಾಗೂ ಇದೀಗ ಬಹಿರಂಗವಾಗಿ ಭಾರಿ ಲಾಭಿ ನಡೆಸಿದ್ದಾರೆ. ಹಾಲಿ ಅಧ್ಯಕ್ಷರಾಗಿರುವ ಸಂಜಯ ಕಪಟಕರ ಅವರ ಸ್ಥಾನಕ್ಕೇರಲು ಮಹಾನಗರ ಜಿಲ್ಲಾ ಪ್ರದಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ , ಜಿಲ್ಲಾ ವಕ್ತಾರ ರವಿನಾಯಕ , ಮಾಜಿ ಮಹಾಪೌರ ಈರೇಶ ಅಂಚಟಗೇರಿ , ಹು-ಧಾ ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ಶಿವು ಮೆಣಸಿನಕಾಯಿ ಮುಂಚೂಣಿ ರೇಸ್‍ನಲ್ಲಿರುವ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಹು-ಧಾ ಮಹಾನಗರ ಜಿಲ್ಲಾಧ್ಯಕ್ಷರಾಗಿ ಸಂಜಯ ಕಪಟಕರ ಅವರು ಕೇವಲ 17 ತಿಂಗಳು ಗತಿಸಿವೆ. ಅವರೂ ಸಹ ತಮ್ಮನ್ನು ಮುಂದುವರೆಸುವಂತೆ ಪಕ್ಷದ ವರಿಷ್ಠರನ್ನು ಕೇಳಬಹುದು. ಆದರೆ ಅವರು ಮುಂದುವರೆಯುವ ಸಾಧ್ಯತೆಗಳು ಕ್ಷೀಣಿಸಿವೆ.
ಮಹತ್ವದ 2024 ರ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷಕ್ಕೆ ಅಧಿಕ ಮತಗಳನ್ನು ಸೆಳೆಯುವ ಸಾಮಥ್ರ್ಯವಿರುವ ಮಹಾನಗರ ಜಿಲ್ಲಾ ಅಧ್ಯಕ್ಷರನ್ನು ನೇಮಿಸುವ ನಿರೀಕ್ಷೆ ಇರುವುದರಿಂದ ವರಿಷ್ಠರು ಎಲ್ಲವನ್ನೂ ಅಳೆದು ತೂಗಿ ಸೂಕ್ತ ಜಿಲ್ಲಾಧ್ಯಕ್ಷರನ್ನು ನೇಮಿಸಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಯಾವುದೇ ಸ್ಥಾನಮಾನಗಳಿಲ್ಲದೇ ಪಕ್ಷಕ್ಕಾಗಿ ಅಹರ್ನಿಷಿ ಶ್ರಮಿಸುತ್ತಿರುವ ದತ್ತಮೂರ್ತಿ ಕುಲಕರ್ಣಿ ಹಾಗೂ ಪಕ್ಷದ ಜಿಲ್ಲಾ ವಕ್ತಾರ ರವಿ ನಾಯಕ ಈ ಪೈಕಿ ಓರ್ವರು ಅಧ್ಯಕ್ಷರಾಗುವ ಸಾಧ್ಯತೆಗಳು ಹೆಚ್ಚಿವೆ. ಈ ಈರ್ವರಲ್ಲಿ ದತ್ತಮೂರ್ತಿ ಕುಲಕರ್ಣಿ ಬಿ.ಇ ಮೆಕ್ಯಾನಿಕಲ್ ಪದವಿಧರರಾಗಿದ್ದರೂ ಸಹ ಇವರು ಕಳೆದ 1984 ರಿಂದ ಸತತವಾಗಿ ಬಿಜೆಪಿಯಲ್ಲಿ ಸಕ್ರಿಯರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದು , ಜಿಲ್ಲಾ ಯುವ ಮೋರ್ಚಾ ಪ್ರದಾನ ಕಾರ್ಯದರ್ಶಿಯಾಗಿ , ಸೆಂಟ್ರಲ್ ಕ್ಷೇತ್ರದ ಉಪಾಧ್ಯಕ್ಷರಾಗಿ , 2 ಬಾರಿ ಜಿಲ್ಲಾ ಪ್ರದಾನ ಕಾರ್ಯದರ್ಶಿಯಾಗಿ ತಮಗೆ ವಹಿಸಿದ ಜವಾಬ್ದಾರಿಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುವದರೊಂದಿಗೆ ರಾಷ್ಟ್ರೋತ್ಥಾನ ರಕ್ತ ಭಂಡಾರದ ಮೂಲಕ ರಕ್ತದಾನ , ಅರ್ಹರಿಗೆ ತ್ವರಿತವಾಗಿ ರಕ್ತ ಪೂರೈಕೆ ಸೇರಿದಂತೆ ಇನ್ನೂ ಹಲವು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜನಾನುರಾಗಿಯಾಗಿರುವದರಿಂದ ಇವರನ್ನು ಪರಿಗಣಿಸುವ ಸಾಧ್ಯತೆ ಅಧಿಕವಾಗಿದೆ.
ಜಿಲ್ಲಾ ವಕ್ತಾರ ರವಿ ನಾಯಕ ಅವರೂ ಸಹ ಬೂತ್ ಮಟ್ಟದಿಂದ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು , ಜಿಲ್ಲಾ ಕಾರ್ಯಾಲಯದ ಕಾರ್ಯದರ್ಶಿ , ಜಿಲ್ಲಾ ಮಾಧ್ಯಮ ವಕ್ತಾರರಾಗಿ ಸೇವೆ ಸಲ್ಲಿಸಿ ಹಾಲಿ ಪಕ್ಷದ ಮಹಾನಗರ ಜಿಲ್ಲಾ ವಕ್ತಾರರಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ , ಯಾವುದೇ ಅಧಿಕಾರದ ಸ್ಥಾನಮಾನ ಪಡೆದಿಲ್ಲವಾದ್ದರಿಂದ ಇವರೂ ಸಹ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.
ಧಾರವಾಡದ ಈರೇಶ ಅಂಚಟಗೇರಿ ಅವರು ಈಗಾಗಲೇ ಮಹಾಪೌರರಾಗಿ ಸೇವೆ ಸಲ್ಲಿಸುವದರೊಂದಿಗೆ ಹಿಂದಿ ಪ್ರಚಾರ ಸಭಾದ ಚೇರ್ಮನ್ ಸ್ಥಾನದಲ್ಲಿರುವದರಿಂದ ಇವರ ಪರಿಗಣನೆಗೆ ವರಿಷ್ಠರು ನಿರಾಸಕ್ತೊ ತೋರಬಹುದು .ತಿಪ್ಪಣ್ಣ ಮಜ್ಜಗಿ ಅವರ ಪತ್ನಿ ಅಶ್ವಿನಿ ಮಹಾಪೌರರಾಗಿ ಸೇವೆ ಸಲ್ಲಿಸಿರುವದು , ಹಿಂದಿನ ಮಹಾನಗರ ಪಾಲಿಕೆ ಸಭಾನಾಯಕರಾಗಿ ತಿಪ್ಪಣ್ಣಗೆ ಸ್ಥಾನಮಾನ ನೀಡಿರುವದು , ಹಾಲಿಯಾಗಿ ತಿಪ್ಪಣ್ಣ ಪಾಲಿಕೆ ಸದಸ್ಯರಾಗಿರುವದರಿಂದ ಇವರಿಗೂ ಅಧ್ಯಕ್ಷಗಿರಿ ಸಿಗುವುದು ಡೌಟ್, ಹಾಗೆಯೇ ಶಿವು ಮೆಣಸಿನಕಾಯಿ ಹಿಂದಿನ ಪಾಲಿಕೆ ಅವಧಿಯಲ್ಲಿ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಅನುಭವಿಸಿರುವದರಿಂದ ಇವರನ್ನೂ ಸಹ ವರಿಷ್ಠರು ಪರಿಗಣಿಸುವ ಸಾಧ್ಯತೆ ವಿರಳವಾಗಿದೆ.
ಒಟ್ಟಾರೆಯಾಗಿ ಮಹಾನಗರ ಜಿಲ್ಲಾ ಬಿಜೆಪಿಯಲ್ಲಿ ಇತ್ತೀಚೆಗೆ ಕೆಲವೊಂದಿಷ್ಟು ವಿಷಯಗಳಿಂದಾಗಿ ಬಣಗಳು ಸೃಷ್ಠಿಯಾಗಿವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಯಾವುದೇ ಭಿನ್ನಮತ ಎದುರಾಗದಂತೆ ನೋಡಿಕೊಂಡು ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವವರು ನೂತನ ಅಧ್ಯಕ್ಷರಾಗಬೇಕಿದೆ. ಈ ದಿಸೆಯಲ್ಲಿ ಜಿಲ್ಲೆಯ ಬಿಜೆಪಿಯಲ್ಲಿ ಸುಪ್ರೀಂ ಆಗಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಕೃಪಾಕಟಾಕ್ಷ ಇರುವವರು ನೂತನ ಅಧ್ಯಕ್ಷರಾಗಬಹುದಾಗಿದೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಇರುವ ಕಾರಣ ಜಿಲ್ಲಾಧ್ಯಕ್ಷರ ನೇಮಕವನ್ನು ಸಾರಾಸಾರ ಅಳೆದು – ತೂಗಿ ಮಾಡಲಾಗುತ್ತದೆ ಎಂಬುದಂತೂ ಸುಸ್ಪಷ್ಟ.
ನಾಡಿದ್ದು ದಿ. 30 ರಂದು ಹುಬ್ಬಳ್ಳಿಯ ಗೋಕುಲ್ ರಸ್ತೆಯ ಕ್ಯೂಬಿಕ್ಸ್ ಹೊಟೆಲ್‍ನಲ್ಲಿ ಮಹಾನಗರ ಜಿಲ್ಲಾ ಹಾಗೂ ಜಿಲ್ಲಾ ಗ್ರಾಮೀಣ ಅಧ್ಯಕ್ಷರ ಆಯ್ಕೆಗೆ ಮಹತ್ವದ ಸಭೆ ನಡೆಯಲಿದ್ದು , ಶಾಸಕರುಗಳಾದ ಅರವಿಂದ ಬೆಲ್ಲದ , ಮಹೇಶ ಟೆಂಗಿನಕಾಯಿ , ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ , ರಾಜಕುಮಾರ ಬಸವಾ ಸೇರಿದಂತೆ ಪಕ್ಷದ ಜಿಲ್ಲಾ ಪ್ರಮುಖರು ಅಭಿಪ್ರಾಯವನ್ನು ಸಂಗ್ರಹಿಸುವ ರಾಜ್ಯ ಬಿಜೆಪಿ ಅಧ್ಯಕ್ಷರು ನೇಮಿಸಿದ ತಂಡ ಅಂತಿಮವಾಗಿ ಮೂವರ ಹೆಸರನ್ನು ಅಖೈರುಗೊಳಿಸಿ ರಾಜ್ಯಾಧ್ಯಕ್ಷರಿಗೆ ವರದಿ ಸಲ್ಲಿಸುವದು