ಜನವರಿ 06: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಅಖಾಡಕ್ಕೆ ಧುಮುಕಲು ಸಿದ್ದತೆ ನಡೆಸಿದ್ದಾರೆ. ರಾಜ್ಯ ಪ್ರವಾಸ ಮೂಲಕ ಜನಾಭಿಪ್ರಾಯ ಸೃಷ್ಟಿಗೆ ಮುಂದಾಗಿದ್ದು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ನಾಯಕರು ರಾಜ್ಯ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹೀನಾಯವಾಗಿ ಸೋಲನ್ನು ಕಂಡಿತ್ತು. ಪಕ್ಷದೊಳಗಿನ ಭಿನ್ನಾಭಿಪ್ರಾಯ, ಕಾಂಗ್ರೆಸ್ ತಂತ್ರಗಾರಿಕೆ, ಗ್ಯಾರಂಟಿ ಯೋಜನೆಗಳು ಚುನಾವಣೆಯ ಮೇಲೆ ತೀವ್ರ ಸ್ವರೂಪದ ಪರಿಣಾಮವನ್ನು ಉಂಟು ಮಾಡಿದ್ದವು. ಪಕ್ಷಕ್ಕಾದ ಹಿನ್ನಲೆಯಿಂದ ಕಾರ್ಯಕರ್ತರಲ್ಲೂ ಹುಮ್ಮಸ್ಸು ಕಡಿಮೆಗೊಂಡಿವೆ. ಈ ನಡುವೆ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಲೋಕಸಭೆ ಚುನಾವಣೆಗೆ ಮೈತ್ರಿಯ ನಿರ್ಧಾರನೂ ಆಗಿದೆ.ಹೀಗಾಗಿ ಪಕ್ಷಕ್ಕೆ ಇನ್ನಷ್ಟು ಚೈತನ್ಯ ತುಂಬಲು ಬಿಜೆಪಿ ನಾಯಕರು ಯಡಿಯೂರಪ್ಪ ಅವರ ಮೂಲಕ ರಾಜ್ಯಾದ್ಯಂತ ಪ್ರವಾಸಕ್ಕೆ ತಯಾರಿ ನಡೆಸಿದ್ದಾರೆ.
ಇನ್ನೂ ರಾಜ್ಯ ಪ್ರವಾಸದ ಕುರಿತು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಬಿಜೆಪಿ ಬಲಪಡಿಸಲು ಶೀಘ್ರವೇ ದಿನಕ್ಕೆ ಎರಡು ಜಿಲ್ಲೆಗಳಂತೆ ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದರು.