ಕಂಪ್ಲಿ: ದೇವಲಾಪುರದಲ್ಲಿ ಸಿಡಿಲಿನ ಅರ್ಭಟ – ಓರ್ವ ಯುವಕನ ಮೃತ್ಯು, ಆರು ಮಂದಿ ಗಾಯ, ಆರು ಕುರಿಗಳ ಸಾವು
ಕಂಪ್ಲಿ ತಾಲ್ಲೂಕಿನ ದೇವಲಾಪುರ ಗ್ರಾಮದಲ್ಲಿ ಮೇ 20, ಮಂಗಳವಾರ ಸಂಜೆ 6 ಗಂಟೆಯ ವೇಳೆ ಎರಡು ಕಡೆ ಸಿಡಿಲು ಬಡಿದ ಘಟನೆ ಸಂಭವಿಸಿದ್ದು, ಇದರಲ್ಲಿ ಆರು ಮಂದಿ ಗಾಯಗೊಂಡಿದ್ದು, ಓರ್ವ ಯುವಕನು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಲ್ಲದೆ ಆರು ಕುರಿಗಳು ಸಿಡಿಲಿಗೆ ಬಲಿಯಾಗಿವೆ.
ರಾಜನಮಟ್ಟಿ ಗ್ರಾಮದಲ್ಲಿ ಸಿಡಿಲು ಬಡಿದ ಪರಿಣಾಮವಾಗಿ ಸಿ.ಡಿ. ಹೇಮಣ್ಣ, ಸಿ.ಡಿ. ತಿಪ್ಪೇಶ ಮತ್ತು ಗೌಡ್ರು ಮಲ್ಲಿ ಎಂಬ ಮೂವರು ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಗೆ ಕರೆದೊಯ್ಯಲಾಗಿದೆ. ಇವರ ಸ್ಥಿತಿ ಸ್ಥಿರವಾಗಿದ್ದು ಯಾವುದೇ ಜೀವಹಾನಿ ಸಂಭವಿಸಿಲ್ಲ.
ಎರೆ ಗ್ರಾಮದಲ್ಲಿ ಶೇಕಪ್ಪನ ಹೊಲದಲ್ಲಿ ಪಂಪಣ್ಣನವರ ಕುಟುಂಬದ ಸದಸ್ಯರಾದ ದೊಡಬಶ್ಯ, ಕರಿಬಸವ ಮತ್ತು ಪಂಪಣ್ಣ ಎಂಬವರಿಗೆ ಸಿಡಿಲು ಬಡಿದಿದ್ದು, ತಕ್ಷಣ ಚಿಕಿತ್ಸೆಗಾಗಿ ಬಳ್ಳಾರಿಗೆ ಕರೆದೊಯ್ಯಲಾಯಿತು.
ಆದರೆ ಗಾಯಗೊಂಡ 26 ವರ್ಷದ ಯುವಕ ಕರಿಬಸವ (ತಂದೆ ಚನ್ನಮೂರ್ತಿ) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದುರಂತ ಸಂಭವಿಸಿದೆ. ಸ್ಥಳದಲ್ಲಿ ಆರು ಕುರಿಗಳೂ ಸಿಡಿಲಿಗೆ ಬಲಿಯಾಗಿವೆ.