ಸಾರ್ವಜನಿಕ ಸಾರಿಗೆ ನೌಕರರ ಮುಷ್ಕರ: ಜನಸಾಮಾನ್ಯರಿಗೆ ತೊಂದರೆ, ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತ
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸಾರಿಗೆ ನೌಕರರು ಮುಷ್ಕರ ಆರಂಭಿಸಿರುವುದರಿಂದ ರಾಜ್ಯದಾದ್ಯಂತ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮುಖ್ಯವಾಗಿ KSRTC, KKRTC ಬಸ್‌ಗಳನ್ನೇ ಅವಲಂಬಿಸಿರುವ ಜನರು ಕೆಲಸಕ್ಕೆ, ಶಾಲೆ-ಕಾಲೇಜುಗಳಿಗೆ ಹೋಗಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬಳ್ಳಾರಿ ಜಿಲ್ಲೆಯ ಕಂಪ್ಲಿ ನಗರದ ಹೊಸ ಬಸ್ ನಿಲ್ದಾಣದಲ್ಲಿ ಇಂದು ಮುಂಜಾನೆ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದಾಗಿ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಿಂದ ಬರುವ ಪ್ರಯಾಣಿಕರು ಅಸಹಾಯ ಸ್ಥಿತಿಗೆ ತುತ್ತಾಗಿದ್ದಾರೆ. ಗದಗ, ಗಂಗಾವತಿ, ಹೊಸಪೇಟೆ ಸೇರಿದಂತೆ ವಿವಿಧ ಕಡೆಗಳಿಗೆ ಹೋಗುವವರು ನಿಲ್ದಾಣದಲ್ಲೇ ನಿಂತು ನಿರ್ಗಮಿಸುವ ಬಸ್ ನಿರೀಕ್ಷಿಸುತ್ತಿದ್ದರು.
ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರು ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೆಲವರು ತುರ್ತು ಅಗತ್ಯದ ಪ್ರಯಾಣಕ್ಕಾಗಿ ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ. ಆದರೆ ಖಾಸಗಿ ವಾಹನಗಳ ದುಬಾರಿ ದರಗಳು ಜನರ ಜೇಬಿಗೆ ಹೊಡೆತ ನೀಡುತ್ತಿದೆ.
ಮುಷ್ಕರದ ಹಿನ್ನಲೆಯಲ್ಲಿ ಸಾರಿಗೆ ಇಲಾಖೆ, ಸರ್ಕಾರ ಹಾಗೂ ನೌಕರರ ಒಕ್ಕೂಟಗಳ ಮಧ್ಯೆ ಮಾತುಕತೆ ಯಶಸ್ವಿಯಾಗಬೇಕೆಂಬ ಆಶೆ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ.