ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ಕಿಡಿಗೇಡಿಗಳು : ಉಪ್ಪಾರಹಳ್ಳಿಯಲ್ಲಿ ನಡೆದ ಘಟನೆ
ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಉಪ್ಪಾರಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ವೇಳೆ ನಾಚಿಕೆಗೇಡು ಘಟನೆ ನಡೆದಿದೆ.
ಗ್ರಾಮದಲ್ಲಿ ನಿನ್ನೆ ರಾತ್ರಿ ಅಂಬೇಡ್ಕರ್ ಜಯಂತಿ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ಡಿಜೆ ಸಹಿತ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆ ನಡೆಯುತ್ತಿತ್ತು. ಕಾರ್ಯಕ್ರಮ ಆರಂಭವಾಗಿ ಕೆಲವೇ ಸಮಯದಲ್ಲಿ ಕೆಲ ಕಿಡಿಗೇಡಿಗಳು ಗಲಾಟೆ ಸೃಷ್ಟಿಸಿದ್ದು, ಗ್ರಾಮ ಮುಖಂಡರು ತಕ್ಷಣವೇ ಪರಿಸ್ಥಿತಿಯನ್ನು ಸಮಾಧಾನಪಡಿಸಿದ್ದರು.
ಆದರೆ ಬಳಿಕ ಗ್ರಾಮದಲ್ಲಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಬೋರ್ಡ್‌ನಲ್ಲಿದ್ದ ಅಂಬೇಡ್ಕರ್ ಭಾವಚಿತ್ರಕ್ಕೆ ದುಷ್ಕರ್ಮಿಗಳು ಸಗಣಿ ಎರಚಿ ಅವಮಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಕಂಪ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಗುಂಪನ್ನು ಚದುರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿ ತನಿಖೆ ಮುಂದುವರೆಸಲಾಗಿದೆ ಎನ್ನಲಾಗಿದೆ.
ಈ ಘಟನೆ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದೆ.
