Kampli : ತಾಲೂಕಿನ ಹಂಪಾದೇವನಹಳ್ಳಿಯಲ್ಲಿ ಅಪರೂಪದ ಶಾಸನ ಪತ್ತೆ

ಕಂಪ್ಲಿ ತಾಲೂಕಿನ ಹಂಪಾದೇವನಹಳ್ಳಿಯಲ್ಲಿ ಅಪರೂಪದ ಶಾಸನ ಪತ್ತೆ

ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಹಂಪಾದೇವನಹಳ್ಳಿಯಲ್ಲಿ ವಿಜಯನಗರ ಸಾಮ್ರಾಜ್ಯ ಕಾಲದ 16ನೇ ಶತಮಾನದ ಅಪರೂಪದ ಶಾಸನ ಪತ್ತೆಯಾಗಿದೆ. ಗ್ರಾಮದ ಪಶ್ಚಿಮ ಭಾಗದಲ್ಲಿರುವ ನಾರಿಹಳ್ಳ ದಂಡೆಯ ಬಳಿ ಈ ಅಪ್ರಕಟಿತ ಶಾಸನ ಕಂಡುಬಂದಿದ್ದು, ಇತಿಹಾಸಾಸಕ್ತರಲ್ಲಿ ಕುತೂಹಲ ಮೂಡಿಸಿದೆ.

ಕೊಪ್ಪಳ ತಾಲೂಕಿನ ಹಿಟ್ನಾಳ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕ ಕೆ. ಅಂಜಿನಯ್ಯ ಅವರು ಶಾಸನವನ್ನು ಪತ್ತೆಹಚ್ಚಿ, ಪ್ರಾಥಮಿಕವಾಗಿ ಓದಿ ಅರ್ಥೈಸಿದ್ದಾರೆ. ಕನ್ನಡ ಲಿಪಿಯಲ್ಲಿ ಇರುವ ಈ ಶಾಸನವು ಶ್ರೀಕೃಷ್ಣದೇವರಾಯ ಅವರ ಆಡಳಿತಕಾಲಕ್ಕೆ ಸೇರಿದ್ದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಶಾಸನದಲ್ಲಿ ಹಂಪಾದೇವನಹಳ್ಳಿಯನ್ನು “ಕೃಷ್ಣರಾಯಪುರ” ಎಂದು ಮರುನಾಮಕರಣ ಮಾಡಿ ದಾನ ನೀಡಿರುವ ಉಲ್ಲೇಖ ಕಂಡುಬಂದಿದೆ. ಶಾಸನದ ಮೇಲ್ಭಾಗದಲ್ಲಿ ಸೂರ್ಯ-ಚಂದ್ರ ಚಿಹ್ನೆಗಳು ಹಾಗೂ ಕೆಳಭಾಗದಲ್ಲಿ ವಿಷ್ಣುವಿನ ವಾಮನ ಅವತಾರದ ಚಿತ್ರ ಕೆತ್ತಲಾಗಿದ್ದು, ಇದು ಆ ಕಾಲದ ಶಿಲ್ಪಕಲೆಯ ವೈಶಿಷ್ಟ್ಯತೆಯನ್ನು ತೋರಿಸುತ್ತದೆ.

ಸುಮಾರು 5 ಅಡಿ ಎತ್ತರದ ಗ್ರಾನೈಟ್ ಶಾಸನವು ವಿಜಯನಗರ ಯುಗದ ಮಹತ್ವದ ಪುರಾವೆಯಾಗಿದ್ದು, ಇತಿಹಾಸದ ದೃಷ್ಟಿಯಿಂದ ಅಮೂಲ್ಯವಾದ ದಾಖಲೆ ಎಂದು ಪರಿಗಣಿಸಲಾಗಿದೆ. ಶಾಸನ ಪತ್ತೆಗೆ ಗ್ರಾಮದ ಯುವಕರಾದ ಕರಿಬಸವ, ಉಮೇಶ್ ಮತ್ತು ಪ್ರವೀಣ್ ಸಹಕರಿಸಿದ್ದಾರೆ.



Previous Post Next Post

Contact Form

f="https://unpkg.com/video.js/dist/video-js.css" rel="stylesheet">