ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಇಲ್ಲ
ನಗರದ ರಾಣಿ ಚನ್ನಮ್ಮ ವೃತ್ತದ ಹತ್ತಿರದಲ್ಲಿರುವ ಮೈದಾನದಲ್ಲಿ ರಾಣಿ ಚನ್ನಮ್ಮ ಮೈದಾನ ಗನಜಾನನ ಉತ್ಸವ ಮಹಾಮಂಡಳವು ಕಾಮಣ್ಣs ರತಿ ಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ಕೋರಿ ಮನವಿ ಸಲ್ಲಿಸಲಾಗಿತ್ತು. ಮಾ. 12 ಪ್ರಧಾನಿ ಮೋದಿಯವರು ನಗರಕ್ಕೆ ಆಗಮಿಸುತ್ತಿದ್ದು, ಭದ್ರತೆ ನೀಡುವ ದೃಷ್ಟಿಯಿಂದ ಮೈದಾನದಲ್ಲಿ ಕಾಮಣ್ಣ ರತಿ ಮೂರ್ತಿ ಪ್ರತಿಷ್ಠಾಪನೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹು-ಧಾ ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ ಹೇಳಿದರು.
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹೋಳಿ ಹಬ್ಬ ಆರಂಭವಾಗಿದೆ. ಮಾ. 7 ಮನವಿ ಸಲ್ಲಿಸಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗದ ಕಾರಣ ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಕಮಿಷನರ್ ಜೊತೆ ಸುದೀರ್ಘವಾಗಿ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ರಾಣಿ ಚನ್ನಮ್ಮ ಮೈದಾನದ ಗಜಾನನ ಉತ್ಸವ ಮಹಾಮಂಡಳ ಜೊತೆ ಚರ್ಚಿಸಲಾಗಿದೆ. ಅವರು ಸಹ ಅನುಮತಿ ನೀಡದಿರುವುದನ್ನು ಲಿಖಿತ ರೂಪದಲ್ಲಿ ನೀಡಲು ಕೇಳಿದ್ದು, ಅವರಿಗೆ ನೀಡಲಾಗುತ್ತದೆ ಎಂದರು.
ಮಹಾನಗರ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಮಾತನಾಡಿ, ಯಾವುದೇ ಬಂದೋಬಸ್ತ್ ಅಥವಾ ವ್ಯವಸ್ಥೆ ಕಲ್ಪಿಸಲು ಕನಿಷ್ಠ 10 ದಿನಗಳು ಬೇಕಾಗುತ್ತದೆ. ಅರ್ಜಿಯನ್ನು ಸಕಾಲದಲ್ಲಿ ನೀಡಿಲ್ಲ. ಈಗಾಗಲೇ ಮಹಾನಗರದಲ್ಲಿ 472 ಕಾಮಣ್ಣ ಮೂರ್ತಿ ಪ್ರತಿಷ್ಠಾನೆ ಆಗಿವೆ. ಅಲ್ಲಿಯೂ ಭದ್ರತೆ ನೀಡಲಾಗಿದೆ. ಪ್ರಧಾನ ಮಂತ್ರಿಗಳ ಕಾರ್ಯಕ್ರಮದ ಭದ್ರತಗೆ ಮೊದಲ ಆದ್ಯತೆ ನೀಡಲಾಗಿದೆ. ಭದ್ರತೆ ಹಾಗೂ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಅನುಮತಿ ನೀಡಲು ಸಾಧ್ಯವಿಲ್ಲ ಎಂದರು.
ಕಾಮಣ್ಣ ಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ಮನವಿ ಮಾಡಲಾಗಿದೆ. ಕನಿಷ್ಠ ಒಂದು ದಿನ ನೀಡಲು ಸಹ ಕೇಳಲಾಗಿದೆ. ಪಾಲಿಕೆ ಆಯುಕ್ತರು ಹಾಗೂ ಪೊಲೀಸ್ ಅಧಿಕಾರಿಗಳು ಚರ್ಚಿಸಿ ತಿಳಿಸುತ್ತೇನೆ ಎಂದಿದ್ದಾರೆ. ಅನುಮತಿ ನೀಡದಿದ್ದರೆ ಹಿರಿಯರೊಂದಿಗೆ ಚರ್ಚಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಣಿ ಚನ್ನಮ್ಮ ಮೈದಾನ ಗನಜಾನನ ಉತ್ಸವ ಮಹಾಮಂಡಳದ ಅಧ್ಯಕ್ಷ ಸಂಜಯ ಬಡಸ್ಕರ ಹೇಳಿದರು.
ವರದಿ : ಬಸವರಾಜ ಕಬಡ್ಡಿ
Tags
ಟಾಪ್ ನ್ಯೂಸ್