ಟಿ ಹೆಚ್ ಸುರೇಶ್ ಬಾಬು ನೇತೃತ್ವದಲ್ಲಿ ವಿವಿಧ ಸಮುದಾಯದ ಮುಖಂಡರು ಬಿಜೆಪಿಗೆ ಸೇರ್ಪಡೆ
ಕಂಪ್ಲಿ ,ಏ.9-ಬಿಜೆಪಿಯ ನಿಯೋಜಿತ ಅಭ್ಯರ್ಥಿ ಟಿ.ಎಚ್. ಸುರೇಶ್ ಬಾಬು ಅವರ ನೇತೃತ್ವದಲ್ಲಿ ಕಂಪ್ಲಿ ಕ್ಷೇತ್ರದ ವಿವಿಧ ಸಮುದಾಯಗಳ ಮುಖಂಡರು ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾದರು.
ಎಮ್ಮಿಗನೂರು ಗ್ರಾಮಕ್ಕೆ ಭೇಟಿ ನೀಡಿದ್ದ ಟಿ.ಹೆಚ್.ಸುರೇಶ್ ಬಾಬು ಶ್ರೀ ಆಂಜನೇಯ ಸ್ವಾಮಿಯ ದರ್ಶನವನ್ನು ಪಡೆದು ಕ್ಷೇತ್ರದ ಸಮೃದ್ಧಿಗಾಗಿ ಪ್ರಾರ್ಥಿಸಿದರು. ಬಳಿಕ ಏರ್ಪಡಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಪಕ್ಷದ ತತ್ವ-ಸಿದ್ಧಾಂತ ಅಭಿವೃದ್ಧಿ ಪರ ಚಿಂತನೆಗಳನ್ನು ಬೆಂಬಲಿಸಿ ರೆಡ್ಡಿ, ಹಡಪದ, ಗಾಣಿಗ, ಸವಿತಾ, ಕೊರವ, ಬೋವಿ, ಹೂಗಾರ ಸಮುದಾಯಗಳ ಹಿರಿಯರು, ಯುವಕರು ನಮ್ಮೊಂದಿಗೆ ಕೈ ಜೋಡಿಸಿರುವುದು ಅಭಿನಂದನೀಯ ಎಂದರು.
ಗ್ರಾಮದ ಎಲ್ಲಾ ಸಮುದಾಯದವರು ನನ್ನೊಂದಿಗೆ ಕೈಜೋಡಿಸಿದ್ದು ಹೆಮ್ಮೆಯ ಕ್ಷಣವಾಗಿದೆ. ಭಾರತೀಯ ಜನತಾ ಪಕ್ಷವು ಸರ್ವ ಜನಾಂಗದವರನ್ನು ಸಮಾನತೆಯಿಂದ ಕಾಣುವ ಮತ್ತು ಬಡವರ ಹಿತಕ್ಕಾಗಿ ಕೆಲಸ ಮಾಡುವ ಏಕೈಕ ಪಕ್ಷವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೂಪಿಸಿರುವ ಜನಪರವಾದ ಯೋಜನೆಗಳ ಮೂಲಕ ಇಂದು ಅಭಿವೃದ್ಧಿಯ ಅವಕಾಶಗಳು ದೇಶದ ಕಟ್ಟ ಕಡೆಯ ವ್ಯಕ್ತಿಗೂ ಲಭಿಸುತ್ತಿದೆ. ಇದೇ ರೀತಿ ನಮ್ಮ ಕಂಪ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ನಮ್ಮ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಎರ್ರಂಗಳಿ ತಿಮ್ಮಾರೆಡ್ಡಿ, ಗುತ್ತಿಗನೂರು ವಿರೂಪಾಕ್ಷಗೌಡ, ಕೆಎ ರಾಮಲಿಂಗಪ್ಪ, ಗ್ರಾಮದ ಸ್ಥಳೀಯ ಮುಖಂಡರು, ಪಕ್ಷದ ಹಿರಿಯ ಕಾರ್ಯಕರ್ತರು, ಅಭಿಮಾನಿಗಳು ಇದ್ದರು.
ವರದಿ : ಚನ್ನಕೇಶವ