Koppal : ಡಬಲ್ ಇಂಜಿನ್‌ಗೆ ಕೊಪ್ಪಳದ ಬೋಗಿ ಸೇರಿಸಿ: ದೇವೇಂದ್ರ ಫಡ್ನವಿಸ್

ಬಿಜೆಪಿ ಅಭ್ಯರ್ಥಿ ಪರ ಮಹಾರಾಷ್ಟ್ರ ಡಿಸಿಎಂ ಫಡ್ನವಿಸ್ ಮತಯಾಚನೆ 

ಡಬಲ್ ಇಂಜಿನ್‌ಗೆ ಕೊಪ್ಪಳದ ಬೋಗಿ ಸೇರಿಸಿ: ದೇವೇಂದ್ರ ಫಡ್ನವಿಸ್

ಕೊಪ್ಪಳ,: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಸವರಾಜ ಬೊಮ್ಮಾಯಿ ಡಬಲ್ ಎಂಜಿನ್ ಇದ್ದಂತೆ. ಈ ಬಲಿಷ್ಠ ಎಂಜಿನ್‌ಗಳಿಗೆ ಕೊಪ್ಪಳ ಕ್ಷೇತ್ರದಿಂದ ಮಂಜುಳಾ ಅವರನ್ನು ಗೆಲ್ಲಿಸುವ ಮೂಲಕ ಹೊಸ ಬೋಗಿಯನ್ನು ಸೇರ್ಪಡೆ ಮಾಡಿ. ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿಗೆ ಆಶೀವದಿಸಿ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮನವಿ ಮಾಡಿದರು. 

ಭಾನುವಾರ ತಾಲೂಕಿನ ಭಾಗ್ಯನಗರ ಪಟ್ಟಣದ ಪವಾರ ಕಲ್ಯಾಣ ಮಂಟಪದಲ್ಲಿ  ಬಿಜೆಪಿ ಅಭ್ಯರ್ಥಿ ಮಂಜುಳಾ ಕರಡಿ ಪರ ಮತಯಾಚಿಸಿ ಮಾತನಾಡಿದ ಅವರು, ಡಬಲ್ ಇಂಜಿನ್ ಸರ್ಕಾರವಿದ್ದ ರಾಜ್ಯವು ಅಭಿವೃದ್ಧಿ ಪಥದಲ್ಲಿರುತ್ತದೆ. ಆದ್ದರಿಂದ ಬಿಜೆಪಿ ಸರ್ಕಾರ ನಿರ್ಮಿಸಲು ಮೇ 10 ರಂದು ಬಿಜೆಪಿಗೆ ಮತ ಹಾಕಿ ಎಂದರು.

ರಾಜೀವ್ ಗಾಂಧಿಯವರು ಪ್ರಧಾನಮಂತ್ರಿ ಆಗಿದ್ದಾಗ ಭಾಷಣಯೊಂದರಲ್ಲಿ ಕೇಂದ್ರದಿಂದ 1 ರೂ. ಕಳುಹಿಸಿದರೆ ಹಳ್ಳಿಗೆ ಮುಟ್ಟುವಾಗ 15 ಪೈಸೆ ತಲುಪುತ್ತಿತ್ತು. 85 ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ. 2014 ರಲ್ಲಿ ಪ್ರಧಾನಿಯಾದ ನರೇಂದ್ರ ಮೋದಿ ಯವರು ಎಲ್ಲರಿಗೂ ಬ್ಯಾಂಕ್ ಖಾತೆ ಮಾಡಿಸಿ, ಕೇಂದ್ರ ದ ಯೋಜನೆಯ ಹಣ ನೇರ ಫಲಾನುಭವಿಗಳ ಖಾತೆಗೆ ಜಮೆ ಮಾಡುವ ಮೂಲಕ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿದ್ದಾರೆ. ಮೋದಿಯವರು ಕಿಸಾನ್ ಸನ್ಮಾನ್ ಯೋಜನೆಯಡಿ ವಾರ್ಷಿಕ 6 ಸಾವಿರ ರೂ. ಹಣವನ್ನು ದೆಹಲಿಯಲ್ಲಿ ಕುಳಿತು ಬಟನ್ ಒತ್ತುವ ಮೂಲಕ ನೇರ ಖಾತೆಗೆ ಜಮೆ ಮಾಡುತ್ತಿದ್ದಾರೆ. ಈ ಹಣಕ್ಕೆ ಕರ್ನಾಟಕ ಬಿಜೆಪಿ ಸರ್ಕಾರ 4 ಸಾವಿರ ರೂ. ಸೇರಿ ಹಣ ನೀಡಲಾಗುತ್ತಿದೆ. ಇದು ಡಬಲ್ ಇಂಜಿನ್ ಸರ್ಕಾರದ ಉಪಯೋಗವಾಗಿದೆ ಎಂದರು. ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ಕೋಟ್ಯಾಂತರ ಮನೆಗಳ ನಿರ್ಮಾಣ ಮಾಡಿದ್ದಾರೆ. ಮೋದಿ ಯವರು ಕರ್ನಾಟಕದಲ್ಲಿ ಸುಮಾರು 50 ಲಕ್ಷ ವೈಯಕ್ತಿಕ ಶೌಚಾಲಯ ನಿರ್ಮಿಸಿ 1 ಕೋಟಿ ಮಹಿಳೆಯರು ಸೇರಿ 2 ಕೋಟಿ ಮಂದಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಕೋವಿಡ್ ವೇಳೆ ಲಾಕ್ ಡೌನ್ ಮಾಡಲಾಯಿತು. ಕೋವಿಡ್ ಲಸಿಕೆ ತಯಾರಿಸದಿದ್ದರೆ, ಬ್ರಿಟನ್ ಬಳಿ ಕೈ ಕಟ್ಟಿ ನಿಂತು ಕೊಂಡು ವ್ಯಾಕ್ಸಿನ್ ನೀಡಿ ಎಂದು ಮನವಿ ಮಾಡಿಕೊಳ್ಳಬೇಕಿತ್ತು. ಈ ಪರಿಸ್ಥಿತಿ ನಿರ್ಮಾಣ ಆಗಬಾರದೆಂದು ದೂರದೃಷ್ಟಿಯಿಟ್ಟು ಲಸಿಕೆ ಭಾರತದಲ್ಲಿ ತಯಾರಿಸಿದ್ದಾರೆ. ವಿಶ್ವದ ಐದು ರಾಷ್ಟ್ರ ಗಳು ಮಾತ್ರ ವಾಕ್ಸಿನ್ ತಯಾರಿಸಿದ್ದವು. ಅದರಲ್ಲಿ ಭಾರತವೂ ಒಂದು. ಲಸಿಕೆ ಶೇಖರಣೆಗೆ ದೇಶಾದ್ಯಂತ 3 ಲಕ್ಷ ಕೋಲ್ಡ್ ಸ್ಟೋರೇಜ್ ನಿರ್ಮಿಸಿ ರಾತ್ರೋ ರಾತ್ರಿ 130 ಕೋಟಿ ಜನತೆಗೆ ವಾಕ್ಸಿನ್ ಸರಬರಾಜು ಮಾಡಿದ್ದರು. ಬೇರೆ ದೇಶಗಳಿಗೂ ಲಸಿಕೆ ನೀಡಿ ಜೀವ ಉಳಿಸಿದ್ದಾರೆ ಎಂದು ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರಗಳನ್ನು ತಿಳಿಸಿದರು. ಕೋವಿಡ್ ಬಳಿಕ ಅಮೇರಿಕಾ, ಚೀನಾ, ಬ್ರಿಟನ್, ಜಪಾನ್, ಯುರೋಪ್ ಸೇರಿ ಬಹುತೇಕ ಎಲ್ಲ ದೇಶಗಳಲ್ಲಿ ಲಾಕ್ ಡೌನ್ ಮಾಡಲಾಗಿತ್ತು. ಆದರೆ, ಭಾರತ ಲಾಕ್ ಡೌನ್ ಸಡಲಿಕರಣ ಮಾಡಿ ಜನರ ಜೀವನ ಯಥಾಸ್ಥಿತಿ ಗೆ ಮರಳಿಸಲಾಗಿತ್ತು. ಲಾಕ್ ಡೌನ್ ವೇಳೆ ಸಣ್ಣ ಉದ್ಯಮ ಹಾಗೂ ಜನರ ಜೀವನ ಮಟ್ಟ ಸುಧಾರಿಸಲು 20 ಲಕ್ಷ ಕೋಟಿ ರೂ. ಆತ್ಮ ನಿರ್ಭರ ಭಾರತ ಯೋಜನೆಯಡಿ ನೀಡಲಾಯಿತು. ಮೋದಿಯವರು ಜಿ- 20 ಅಧ್ಯಕ್ಷರಾಗಿದ್ದಾರೆ.  ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅಂತಾರಾಷ್ಟ್ರೀಯ ಸಭೆಗಳು ನಡೆದರೆ, ಅವರನ್ನು ಹಿಂದೆ ಕೂರಿಸುತ್ತಿದ್ದರು‌. ಮೋದಿ ಅವರು ಮೊದಲ ಸಾಲಲ್ಲಿ ಕೂರುತ್ತಾರೆ. ಮೋದಿಯವರ ಕೈ ಕುಲಿಕಿಸಲು ಸಾಲು ಗಟ್ಟಿರುತ್ತಾರೆ. ಇದು ಭಾರತದ ಶಕ್ತಿ ತೋರಿಸುತ್ತದೆ. ಕಾಂಗ್ರೆಸ್ ಅವಧಿಯಲ್ಲಿ ಮಂಡಿಸುವ ಬಜೆಟ್ ಗಿಂತ ಈಗ ಮೂರು ಪಟ್ಟು ಬಜೆಟ್ ಗಾತ್ರ ಹೆಚ್ಚಾಗಿದೆ. ಮೂಲಸೌಕರ್ಯ ಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕರ್ನಾಟಕ ಬಿಜೆಪಿ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಮತ್ತೊಮ್ಮೆ ಬಿಜೆಪಿ ಸರ್ಕಾರಕ್ಕೆ ಆಶೀರ್ವಾದ ಮಾಡಿ ಎಂದರು. ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ,ಬಳ್ಳಾರಿ ವಿಭಾಗ ಸಹ ಪ್ರಭಾರಿ ಚಂದ್ರಶೇಖರ ಪಾಟೀಲ ಹಲಗೇರಿ, ಮುಖಂಡರಾದ ಗಿರೇಗೌಡ, ನವೀನ ಗುಳಗಣ್ಣನವರ, ಪ್ರದೀಪ ಹಿಟ್ನಾಳ, ಆನಂದ ಗುಪ್ತಾ, ಅಮರೇಶ ಕರಡಿ, ಮಹಾಂತೇಶ ಪಾಟೀಲ ಸೇರಿದಂತೆ ಅನೇಕರು ಇದ್ದರು.

ಭಾರತ ಹಿಂದೂ ದೇಶ. ಅಧಿಕಾರಕ್ಕೆ ಬಂದರೆ ಬಜರಂಗದಳ ನಿಷೇಧಿಸುವ ಬಗ್ಗೆ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಕಾಂಗ್ರೆಸ್ ಪಕ್ಷವನ್ನು ಚುನಾವಣೆಯಲ್ಲಿ ಸೋಲಿಸಿ ಲಂಕಾಕ್ಕೆ ಕಳುಹಿಸಿ. ಭಾರತ ಮಾತಾಕಿ ಜೈ, ಜೈ ಬಜರಂಗಬಲಿ, ಜೈ ಶ್ರೀರಾಮ್ ಎನ್ನುವುದು ಅಪರಾಧವೇ?  ಇದು ಅಪರಾಧ ಎನ್ನುವುದಾದರೆ ನಾನು ಇದೇ ಅಪರಾಧ ಮಾಡಲು ಸಿದ್ಧನಿದ್ದೇನೆ. - ದೇವೇಂದ್ರ ಫಡ್ನವಿಸ್, ಮಹಾರಾಷ್ಟ್ರ ಉಪಮುಖ್ಯಮಂತ್ರಿ.


ವರದಿ : ಶಿವಕುಮಾರ ಹಿರೇಮಠ

Previous Post Next Post

Contact Form

f="https://unpkg.com/video.js/dist/video-js.css" rel="stylesheet">