Koppal JDS : ವಾರ್ಡ್‍ಗಳಲ್ಲಿ ಜೆಡಿಎಸ್ ಅಭ್ಯರ್ಥಿ ಭರ್ಜರಿ ಮತಯಾಚನೆ


ವಾರ್ಡ್‍ಗಳಲ್ಲಿ ಜೆಡಿಎಸ್ ಅಭ್ಯರ್ಥಿ ಭರ್ಜರಿ ಮತಯಾಚನೆ

ಕೊಪ್ಪಳ,: ಮತದಾರರ ಆಶೀರ್ವಾದದಿಂದ ನಾನು ಶಾಸಕನಾಗಿ ಆಯ್ಕೆಯಾದರೆ ವಿಕಲಚೇತನರ, ತೃತೀಯ ಲಿಂಗಿಗಳ ಸರ್ವೋದಯಕ್ಕಾಗಿ ವಿಶೇಷ ಘಟಕವನ್ನು ಸ್ಥಾಪಿಸಲಾಗುವುದು ಎಂದು ಜೆಡಿಎಸ್ ಅಭ್ಯರ್ಥಿ ಸಿ ವಿ ಚಂದ್ರಶೇಖರ ಹೇಳಿದರು.

ಅವರು ನಗರದ ಕೆಲವು ವಾರ್ಡ್‍ಗಳಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು.

"ಸರಕಾರ ವಿಕಲಚೇತನರು ಹಾಗೂ ತೃತೀಯ ಲಿಂಗಿಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೇ, ಅವುಗಳ ಸೌಲಭ್ಯ ಸರಿಯಾದ ಫಲಾನುಭವಿಗಳಿಗೆ ಸಿಗುತ್ತಿಲ್ಲ. ದೃಷ್ಟಿ ಇರದವರಿಗೆ ಮೂರು ಚಕ್ರಗಳ ವಾಹನ, ಕಾಲು ಕಳೆದುಕೊಂಡವರಿಗೆ ಕನ್ನಡಕ ಕೊಟ್ಟರೇನು ಪ್ರಯೋಜನ? ನಮ್ಮನ್ನಾಳಿದ ಶಾಸಕರು ಹೆಸರಿಗಷ್ಟೇ ಕೆಲ ಫಲಾನುಭವಿಗಳಿಗೆ ಸೈಕಲ್ ವಿತರಿಸಿ, ಅವರೊಂದಿಗೆ ಫೋಟೊ ತೆಗೆಸಿಕೊಂಡು ಮಾದ್ಯಮದಲ್ಲಿ ಪುಕ್ಕಟೆ ಪ್ರಚಾರ ಪಡೆದರೇ ಹೊರತು ವಾಸ್ತವ ಅರಿತು ಕೆಲಸ ಮಾಡಲಿಲ್ಲ. ಹೀಗಾಗಿ ವಿಕಲಚೇತನರು, ತೃತೀಯ ಲಿಂಗಿಗಳು ಹಾಗೂ ವಿರಳ ರೋಗಗಳಿಂದ ಬಳಲುತ್ತಿರುವವರ ಪರಸ್ಥಿತಿ ಕೊಪ್ಪಳದಲ್ಲಿ ಚಿಂತಾಜನಕವಾಗಿದೆ ಎಂದರು. ಪಕ್ಷ ಅಧಿಕಾರಕ್ಕೆ ಬಂದರೇ ವಿಕಲಚೇತನರು, ತೃತೀಯ ಲಿಂಗಿಗಳು ಹಾಗೂ ವಿರಳ ರೋಗಗಳಿಂದ ಬಳಲುತ್ತಿರುವವರಿಗಾಗಿಯೇ ಕ್ಷೇತ್ರದಲ್ಲಿ ಒಂದು ವಿಶೇಷ ಘಟಕ ಪ್ರಾರಂಭಿಸುತ್ತೇವೆ. ಈ ಘಟಕ ಸಂಬಂಧ ಪಟ್ಟ ಸಂಘ-ಸಂಸ್ಥೆ ಹಾಗೂ ಸರಕಾರಿ ಇಲಾಖೆಗಳ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ನಿರ್ದಿಷ್ಟ ಫಲಾನುಭವಿಗೆ ಸಿಗಬೇಕಾದ ನಿರ್ದಿಷ್ಟ ಸೌಲಭ್ಯವನ್ನು ಒದಗಿಸುತ್ತವೆ. ಇದು ಕ್ಷೇತ್ರದ ಇತಿಹಾಸದಲ್ಲಿಯೇ ವಿನೂತನ ಪ್ರಯೋಗವಾಗಲಿದೆ ಎಂದರು.

ಜಿಲ್ಲೆಯಲ್ಲಿರುವ ಎಲ್ಲಾ ಕೈಗಾರಿಕಾ ಘಟಕಗಳಲ್ಲಿ ಕಡ್ಡಾಯವಾಗಿ ಸ್ಥಳೀಯರಿಗೇ ಉದ್ಯೋಗ ಸಿಗುವಂತೆ ನೋಡಿಕೊಳ್ಳಲಾಗುವುದು. ಖಾಸಗಿ ಕ್ಷೇತ್ರದವರೊಂದಿಗೆ ಸಂಪರ್ಕ ಸಾಧಿಸಿ ನಿಯಮಿತವಾಗಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುವುದು. ಕಲಾಣ ಕರ್ನಾಟಕ ಪ್ರದೇಶಕ್ಕೆ ಮೀಸಲಾಗಿರುವ ಸರಕಾರಿ ಹುದ್ದೆಗಳನ್ನು ಭರ್ತಿಮಾಡಿಕೊಳ್ಳುವಂತೆ ಸರಕಾರದ ಮೇಲೆ ನಿರಂತರ ಒತ್ತಡ ಹೇರಲಾಗುವುದು. ಪ್ರತಿಯೊಂದು ಹೋಬಳಿಯಲ್ಲಿಯೂ ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಯುವಕರಿಗಾಗಿಯೇ ವಿವಿಧ ಕ್ರೀಡೆ ಹಾಗೂ ಸಾಂಸ್ಕ್ರತಿಕ ರಂಗಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು. ಪಕ್ಷದ ಜಿಲ್ಲಾಧ್ಯಕ್ಷರಾದ ವೀರೇಶ ಮಹಾಂತಯ್ಯನಮಠ, ಮುಖಂಡರಾದ ಚನ್ನಪ್ಪ ಮುತ್ತಾಳ, ಅಫ್ಸರ್ ಸಾಬ್, ಗಾಳೆಪ್ಪ ಕಡೆಮನಿ, ಈಶಪ್ಪ ಮಾದಿನೂರ, ಸಂಗಪ್ಪ ವಕ್ಕಳದ, ಡಾ. ಮಹೇಂದ್ರ ಕಿಂದ್ರೆ, ಡಾ. ಮಹೇಶ ಗೋವನಕೊಪ್ಪ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

ವರದಿ : ಶಿವಕುಮಾರ ಹಿರೇಮಠ

Previous Post Next Post

Contact Form

f="https://unpkg.com/video.js/dist/video-js.css" rel="stylesheet">