ಅಂತೂ ಇಂತೂ ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕವಾಯ್ತು.... .
ಕಳೆದ ನಾಲ್ಕೈದು ತಿಂಗಳಿಂದ ಪ್ರತಿಪಕ್ಷಗಳ ಬಾಯಿಗೆ ಆಹಾರವಾಗಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಅಂತೂ ಇಂತೂ ನೇಮಕವಾಯ್ತು ಎಂಬಂತಾಗಿದೆ. ಅಂದುಕೊಂಡಂತೆ ಶಾಸಕ ಬಿ.ವೈ.ವಿಜಯೇಂದ್ರ ಅವರು ರಾಜ್ಯ ಕಮಲಾಧಿಪತಿಯನ್ನಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ರಾಜ್ಯ ರಾಜಕೀಯ ರಾಜಾಹುಲಿ ಎಂತಲೇ ಕರೆಯಲ್ಪಡುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರ ಪುತ್ರ ಹಾಲಿ ಶಾಸಕ ಬಿ.ವೈ.ವಿಜಯೇಂದ್ರ ಅವರು ರಾಜ್ಯ ಬಿಜೆಪಿ ಘಟಕದ ನೂತನ ಸಾರಥಿಯಾಗಿ ನೇಮಕವಾಗಿದ್ದು ರಾಜ್ಯ ರಾಜಕೀಯ ವಲಯದಲ್ಲಿ ಹಲವು ರೀತಿಯ ಚರ್ಚೆಗೆ ಗ್ರಾಸವಾಗಿದೆ. ಲಿಂಗಾಯತ ಸಮುದಾಯವನ್ನು ಸೆಳೆದುಕೊಳ್ಳಲು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾನ್ಯತೆ ನೀಡುವುದು, ಸಿಎಂ ಕುರ್ಚಿಯಿಂದ ಕೆಳಗಿಳಿಸಿ ಯಡಿಯೂರಪ್ಪ ಅವರಿಗೆ ಮಾಡಿದ ಅಪಮಾನವನ್ನು ಸರಿದೂಗಿಸುವುದು ಸೇರಿದಂತೆ ಬೇರೆ ಬೇರೆ ರಾಜಕೀಯ ಲೆಕ್ಕಾಚಾರದೊಂದಿಗೆ ಬಿ.ವೈ.ವಿಜಯೇಂದ್ರ ಅವರಿಗೆ ಮಣೆ ಹಾಕಲಾಗಿದೆ ಎಂಬ ವಿಶ್ಲೇಷಣೆ ರಾಜಕೀಯ ಮುತ್ಸದ್ದಿಗಳಿಂದ ಕೇಳಲಾಗುತ್ತಿದೆ. ಪುತ್ರ ಬಿ.ವೈ.ವಿಜಯೇಂದ್ರ ನೇಮಕದಿಂದಾಗಿ ರಾಜ್ಯ ಬಿಜೆಪಿಯಲ್ಲಿ ಮತ್ತೆ ಮಾಜಿ ಸಿಎಂ ಯಡಿಯೂರಪ್ಪ ಅಧಿಪತ್ಯ ಸಾಧಿಸಲು ಸಹಕಾರಿಯಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದೆಯಲ್ಲದೆ ಹಲವಾರು ರೀತಿಯ ರಾಜಕೀಯ ಲೆಕ್ಕಾಚಾರಕ್ಕೆ ಕಾರಣವಾಗಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕರ್ನಾಟಕ ಬಿಜೆಪಿಯ ಅಧ್ಯಕ್ಷರಾಗುವುದು ಬಹುತೇಕ ಖಚಿತ ಎಂಬ ಸುದ್ದಿ ಮಧ್ಯೆ ಬಿ.ವೈ.ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕವಾಗಿದ್ದು ಅಚ್ಚರಿ ಮೂಡಿಸಿರುವ ಜೊತೆಗೆ ಲೋಕಸಭಾ ಚುನಾವಣಾ ಕದನಕ್ಕೆ ಭರ್ಜರಿ ಅಸ್ತ್ರವನ್ನು ಬಿಜೆಪಿ ಹೈಕಮಾಂಡ್ ಬಿಟ್ಟಂತಾಗಿದೆ.
