ತೂಬಗೆರೆಯಲ್ಲಿ ಕನಕದಾಸ ಜಯಂತಿ ಆಚರಣೆ
ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಕುರುಬ ಸಮಾಜದ ವತಿಯಿಂದ ದಾಸವರೇಣ್ಯ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.
ಬಸ್ ನಿಲ್ದಾಣದಲ್ಲಿ ಪುಷ್ಪಾಲಂಕಾರಗೊಂಡಿದ್ದ ವೇದಿಕೆಯಲ್ಲಿ ಕನಕದಾಸರ ಭಾವಚಿತ್ರವಿಟ್ಟು ಪುಷ್ಪಾರ್ಚನೆ, ಅನ್ನದಾನ ಮಾಡುವುದರ ಮೂಲಕ ಮಹನೀಯರ ಜಯಂತಿಯನ್ನು ಆಚರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತೂಬಗೆರೆ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ರವಿಸಿದ್ದಪ್ಪ ಕನಕದಾಸರ ಹುಟ್ಟು, ಬಾಲ್ಯದ ಜೀವನ ಅವರ ಸಾಧನೆಗಳನ್ನು ತಿಳಿಸಿಕೊಟ್ಟರು.
ಯುವ ಮುಖಂಡ ಉದಯ ಆರಾಧ್ಯ ಮಾತನಾಡಿ ಕೀರ್ತನಕಾರರಾಗಿ, ತತ್ವಜ್ಞಾನಿಯಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಅನನ್ಯ ಕೊಡುಗೆಯನ್ನು ನೀಡಿದವರು ಶ್ರೀ ಕನಕದಾಸರು.
ಕ್ರಿಸ್ತಶಕ 1509 ರಲ್ಲಿ ಶಿಗ್ಗಾವಿ ತಾಲೂಕು ಬಾಡ ಗ್ರಾಮದಲ್ಲಿ ಜನಿಸಿದ ದಂಡನಾಯಕ ಶಿವಪ್ಪ ನಾಯಕ ಯುದ್ಧದಲ್ಲಿ ಸೋತ ನಂತರ ವೈರಾಗ್ಯ ಉಂಟಾಗಿ ಹರಿಭಕ್ತರಾಗಿ ಕನಕದಾಸರಾದರು ಎಂಬ ಐತಿಹ್ಯವಿದೆ. ಕಾಗಿನೆಲೆ ಆದಿಕೇಶವರಾಯ ಅಂಕಿತದಲ್ಲಿ ದಾಸ ಸಾಹಿತ್ಯದ ಮೂಲಕ ಜಾತಿ ಮತ ಕುಲಗಳ ಬೇದ ಭಾವವನ್ನು ತೊಡೆದು ಸಮಾಜದ ಪಿಡುಗುಗಳ ಬಗ್ಗೆ ಸರಳ ಭಾಷೆಯಲ್ಲಿ ತಿಳಿಸಿ ಸಾಮಾಜಿಕ ಕ್ರಾಂತಿ ಸಾರಿದ ಶ್ರೇಷ್ಠ ಸಂತ ಎಂದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅರವಿಂದ, ಕೆಪಿಸಿಸಿ ಸದಸ್ಯರಾದ ಮುನಿರಾಜು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕೃಷ್ಣಮೂರ್ತಿ, ಸದಸ್ಯರುಗಳಾದ ಮುನಿಕೃಷ್ಣಪ್ಪ, ಕೃಷ್ಣಪ್ಪ, ಕುರುಬ ಸಮಾಜದ ಮುಖಂಡರಾದ ದೇವೇಂದ್ರ ಸ್ವಾಮಿ, ಕಿಟ್ಟಿ, ಕೇಬಲ್ ಮಂಜು, ಸುನೀಲ್, ಯುವ ಮುಖಂಡ ಉದಯ ಆರಾಧ್ಯ. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್ ಊರಿನ ಮುಖಂಡರುಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.
