ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ದುಡಿಯುವ ಜನರ ಮಹಾ ಧರಣಿ
Kampli :
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನ.26 ರಿಂದ 28ರವರೆಗೆ ಸತತ ಮೂರು ದಿನಗಳ ಕಾಲ ರಾಜ್ ಭವನ್ ಚಲೋ ಹೆಸರಿನಲ್ಲಿ ದುಡಿಯುವ ಜನರ ಐತಿಹಾಸಿಕ ಮಹಾ ದರಣಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ಕರಿಯಪ್ಪ ಗುಡಿಮನಿ ಹೇಳಿದರು.
ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ಸರ್ಕಲ್ ನಲ್ಲಿ ಧರಣಿಯ ಕುರಿತಾದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಸರ್ಕಾರ ಕೂಡಲೇ ಬಗರ್ ಹುಕುಂ ಸಮಿತಿಗಳನ್ನು ರಚಿಸಬೇಕು. ಮತ್ತು ಅರ್ಜಿ ಸಲ್ಲಿಸಿ ಸಾಗುವಳಿ ಮಾಡುತ್ತಿರುವ ಎಲ್ಲಾ ಭೂರಹಿತರಿಗೆ ಭೂಮಿಯ ಹಕ್ಕುಪತ್ರ ನೀಡಬೇಕು. ಅರ್ಜಿ ಸಲ್ಲಿಸಿದ ರೈತರನ್ನು ಯಾವುದೇ ಕಾರಣಕ್ಕೂ ಭೂಮಿಯಿಂದ ಒಕ್ಕಲೇಳಿಸಬಾರದು. ಅರಣ್ಯ ಹಕ್ಕು ಕಾಯ್ದೆ 2006ನ್ನು ಜಾರಿ ಮಾಡುವ ಮೂಲಕ ಅರಣ್ಯವಾಸಿಗಳಿಗೆ ಭೂಮಿ ಮತ್ತು ಅವರು ವಾಸಿಸುವ ಜಾಗಗಳಿಗೆ ಮಂಜೂರಾತಿ ನೀಡಬೇಕು. ಅರಣ್ಯ ಅರಣ್ಯ-ಕಂದಾಯ ಭೂಮಿಗಳ ಜಂಟಿ ಸರ್ವೆ ನಡೆಸಿ, ಭೂರಹಿತರ ಸಾಗುವಳಿ ಭೂಮಿಗಳಿಗೆ ಹಕ್ಕುಪತ್ರ ನೀಡಬೇಕು. ಅರಣ್ಯ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ಚಿಕ್ಕಮಗಳೂರು-ಕೊಡಗು ಜಿಲ್ಲೆಗಳಲ್ಲಿ ಅರಣ್ಯ, ಪರಿಸರ ಸಂರಕ್ಷಣೆ ನೆಪದಲ್ಲಿ ದಿನಕ್ಕೊಂದು ಕಾನೂನು ತಂದು ಗೊಂದಲ ಸೃಷ್ಟಿಸುತ್ತಿರುವುದನ್ನು ನಿವಾರಿಸಬೇಕು. ಅರ್ಜಿ ಸಲ್ಲಿಸಿರುವ ಎಲ್ಲಾ ನಿವೇಶನ ರಹಿತರಿಗೆ ನಿವೇಶನ, ವಸತಿ ರಹಿತರಿಗೆ ವಸತಿ ಹಂಚಿಕೆಯಾಬೇಕು. ಸ್ಲಮ್ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕಲ್ಲದೆ ಅವರ ಜಾಗಗಳಿಗೆ ಭದ್ರತೆ ನೀಡಬೇಕು. ಹಲವು ದಶಕಗಳಿಂದ ಅರ್ಜಿ ಸಲ್ಲಿಸಿರುವ ಲಕ್ಷಾಂತರ ಜನರ, ನಗರ ಮಿತಿ ವ್ಯಪ್ತಿಯಲ್ಲಿ ತಿರಸ್ಕರಿಸಲ್ಪಟ್ಟ/ಪೆಂಡಿಂಗ್ ನಲ್ಲಿರುವ ಎಲ್ಲಾ ಅರ್ಜಿಗಳನ್ನು ಪುನರ್ ಪರಿಶೀಲಿಸಿ, ಒಂದು ಬಾರಿ ಅವಕಾಶ (ಒನ್ ಟೈಮ್ ಸೆಟಲ್ ಮೆಂಟ್) ಕಲ್ಪಿಸುವ ಮೂಲಕ ನ್ಯಾಯ ದೊರಕಿಸಿಕೊಡಬೇಕು. ರೈತರ ಉತ್ಪನ್ನಗಳಿಗೆ ಎಂ.ಎಸ್. ಸ್ವಾಮಿನಾಥನ್ ಶಿಫಾರಸ್ಸಿನಂತೆ ಬೆಂಬಲ ಬೆಲೆ ಹಾಗೂ ಖರೀದಿ ಖಾತ್ರಿ ಒದಗಿಸುವ ಕಾನೂನು ಜಾರಿ ಮಾಡಬೇಕು. ರೈತರಿಗೆ ನೀಡುವ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಹಾಗೂ ವಿದ್ಯುಚ್ಛಕ್ತಿ ಮೇಲಿನ ಸಬ್ಸಿಡಿ ಮೊತ್ತ ಹೆಚ್ಚಿಸಬೇಕು. ಎಪಿಎಂಸಿಯನ್ನು ರದ್ದುಗೊಳಿಸಿರುವ ಕಾನೂನು ವಾಪಸ್ ತೆಗೆದುಕೊಳ್ಳಬೇಕು. ಭೂಮಿಗಾಗಿ ಹೋರಾಟ ನಡೆಸಿದವರ ಮೇಲೆ ದಾಖಲಿಸಿರುವ ಪೊಲೀಸ್ ಕೇಸುಗಳನ್ನು ವಾಪಸ್ ಪಡೆಯಬೇಕು. ಕೈಗಾರಿಕೆ/ಅಭಿವೃದ್ಧಿ ಹೆಸರಿನಲ್ಲಿ ರೈತರ ಒಪ್ಪಿಗೆಯಿಲ್ಲದೆ, ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಬಾರದು. ಸೇರಿದಂತೆ ಒಟ್ಟಾರೆ 24 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾ ಸಮಿತಿಯ ಮುಖಂಡರಾದ ವಸಂತ್ ರಾಜ್ ಕಹಳೆ, ನೀಲಪ್ಪ ಪೈಂಟರ್, ಧನಂಜಯ್, ಮರೆಣ್ಣ.ಡಿ.ಎಸ್, ಮಲ್ಲಿಕಾರ್ಜುನ್, ಕೊಪ್ಪಳ ಜಿಲ್ಲೆಯ ಮುಖಂಡ ದುರ್ಗೇಶ್, ವಕೀಲ ಹುಲುಗಪ್ಪ ಸೇರಿದಂತೆ ಇತರರಿದ್ದರು.
