ತೆಲಂಗಾಣದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೊದಲ ದಿನವೇ ರೇವಂತ್ ರೆಡ್ಡಿ ಎರಡು ಪ್ರಮುಖ ಕಡತಗಳಿಗೆ ಸಹಿ ಹಾಕಿದ್ದಾರೆ. ಈ ಪೈಕಿ ಒಂದು ಚುನಾವಣಾ ಪೂರ್ವ ಘೋಷಿಸಿದ್ದ ಆರು ಗ್ಯಾರಂಟಿಗಳ ಅನುಷ್ಠಾನ ಖಡತ, ಮತ್ತೊಂದು ವಿಶೇಷ ಚೇತನ ಮಹಿಳೆಯೊಬ್ಬರಿಗೆ ಉದ್ಯೋಗ ಒದಗಿಸುವುದು ಎಂದು ವರದಿಗಳು ಹೇಳಿವೆ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬಂದ ಮೊದಲ ದಿನವೇ ಆರು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು ಎಂದು ಚುನಾವಣಾ ಪ್ರಚಾರದ ವೇಳೆ ರೇವಂತ್ ರೆಡ್ಡಿ ಘೋಷಣೆ ಮಾಡಿದ್ದರು. ಅಲ್ಲದೆ, ವಾರ್ಷಿಕ ಉದ್ಯೋಗ ಕ್ಯಾಲೆಂಡರ್ ಪರಿಚಯಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ 6 ಗ್ಯಾರಂಟಿಗಳ ಜಾರಿ ಪ್ರಕ್ರಿಯೆಗೆ ಮೊದಲ ದಿನವೇ ಚಾಲನೆ ನೀಡಿದ್ದಾರೆ.
ವಿಶೇಷ ಚೇತನ ಮಹಿಳೆ ರಜನಿ ಕಳೆದ ಅಕ್ಟೋಬರ್‌ನಲ್ಲಿ ಹೈದರಾಬಾದ್‌ನ ಗಾಂಧಿ ಭವನದಲ್ಲಿ ರೇವಂತ್ ರೆಡ್ಡಿಯವರನ್ನು ಭೇಟಿಯಾಗಿದ್ದರು. ಎಂಕಾಂ ಪದವಿ ಮುಗಿಸಿದ್ದರೂ ಖಾಸಗಿ ಅಥವಾ ಸರ್ಕಾರಿ ವಲಯದಲ್ಲಿ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಸಂಕಷ್ಟವನ್ನು ವಿವರಿಸಿದ್ದರು. ರಜನಿ ಅವರ ಕಷ್ಟ ಆಲಿಸಿದ್ದ ರೇವಂತ್ ರೆಡ್ಡಿ ಅವರಿಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೀಡಿದ್ದರು. ಪಕ್ಷ ಅಧಿಕಾರಕ್ಕೆ ಬಂದರೆ ಮೊದಲ ದಿನವೇ ಕೆಲಸ ನೀಡುವುದಾಗಿ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ರಜನಿ ಅವರಿಗೆ ರೇವಂತ್ ರೆಡ್ಡಿ ಕೆಲಸ ಕೊಟ್ಟಿದ್ದಾರೆ.
ತನ್ನ ಪ್ರಮಾಣ ವಚನ ಸಮಾರಂಭಕ್ಕೆ ಬರುವಂತೆ ರಜನಿ ಅವರಿಗೆ ರೇವಂತ್ ರೆಡ್ಡಿ ಆಹ್ವಾನ ನೀಡಿದ್ದರು. ಗುರುವಾರ ಪ್ರಮಾಣ ವಚನ ಸ್ವೀಕಾರದ ನಂತರ ರಜನಿ ಅವರನ್ನು ವೇದಿಕೆಗೆ ಆಹ್ವಾನಿಸಲಾಯಿತು. ಅಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಎ. ಶಾಂತಿ ಕುಮಾರಿ ನೇಮಕಾತಿ ಪತ್ರದೊಂದಿಗೆ ಸಿದ್ಧರಾಗಿದ್ದರು. ಸಾವಿರಾರು ಜನರ ಮುಂದೆ ರೇವಂತ್ ರೆಡ್ಡಿ ವೇದಿಕೆಯಲ್ಲೇ ರಜನಿ ಅವರಿಗೆ ನೇಮಕಾತಿ ಪತ್ರ ಹಸ್ತಾಂತರಿಸಿದರು.
ಆರು ಗ್ಯಾರಂಟಿ ನೀಡಿದ ಕಾಂಗ್ರೆಸ್ :
ಕರ್ನಾಟಕದಲ್ಲಿ ಐದು ಗ್ಯಾರಂಟಿ ಘೋಷಿಸಿದ್ದ ಕಾಂಗ್ರೆಸ್, ತೆಲಂಗಾಣದಲ್ಲಿ ಅರು ಚುನಾವಣಾ ಪೂರ್ವ ಗ್ಯಾರಂಟಿಗಳನ್ನು ಘೋಷಿಸಿತ್ತು. ಅವುಗಳು ಹೀಗಿವೆ..
1.ಮಹಾಲಕ್ಷ್ಮಿ: ಪ್ರತಿ ತಿಂಗಳು ಮನೆಯ ಯಜಮಾನಿಗೆ ₹2,500, ರೂ. ₹500ಕ್ಕೆ ಗ್ಯಾಸ್ ಸಿಲಿಂಡರ್, ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ
2.ರೈತ ಭರೋಸಾ: ಪ್ರತಿ ವರ್ಷ ರೈತರಿಗೆ, ಗೇಣಿದಾರ ರೈತರಿಗೆ ಎಕರೆಗೆ ₹15,000, ಕೃಷಿ ಕಾರ್ಮಿಕರಿಗೆ ವರ್ಷಕ್ಕೆ ₹12,000,ಭತ್ತದ ಬೆಳೆಗೆ ವರ್ಷಕ್ಕೆ ₹500 ಬೋನಸ್
3.ಗೃಹ ಜ್ಯೋತಿ: ಈ ಯೋಜನೆಯಡಿ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್
4. ಇಂದಿರಮ್ಮ ಇಂಡ್ಲು: ಎಲ್ಲಾ ತೆಲಂಗಾಣ ಚಳುವಳಿ ಹೋರಾಟಗಾರರಿಗೆ ವಸತಿ, ಸ್ವಂತ ಮನೆ ಇಲ್ಲದವರಿಗೆ ಮನೆ, ನಿವೇಶನ ಮತ್ತು ಬಡವರಿಗೆ ಮನೆ ನಿರ್ಮಾಣಕ್ಕೆ ₹5 ಲಕ್ಷ
5. ಯುವ ವಿಕಾಸಂ: ವಿದ್ಯಾರ್ಥಿಗಳಿಗೆ ₹5 ಲಕ್ಷ ಮೌಲ್ಯದ ವಿದ್ಯಾ ಭರೋಸಾ ಕಾರ್ಡ್, ಪ್ರತಿ ಮಂಡಲದಲ್ಲಿ ತೆಲಂಗಾಣ ಅಂತಾರಾಷ್ಟ್ರೀಯ ಶಾಲೆಗಳನ್ನು ಸ್ಥಾಪಿಸುವುದು
6. ಚೇಯುತ: ಹಿರಿಯ ನಾಗರಿಕರಿಗೆ ₹4,000 ಮಾಸಿಕ ಪಿಂಚಣಿ, ರಾಜೀವ್ ಆರೋಗ್ಯಶ್ರೀ ವಿಮೆಯಡಿ ₹10 ಲಕ್ಷದ ವಿಮೆ
ಈ ಗ್ಯಾರಂಟಿಗಳನ್ನು ಶೀಘ್ರದಲ್ಲೇ ಜಾರಿಗೊಳಿಸುವುದಾಗಿ ಸಿಎಂ ರೇವಂತ್ ರೆಡ್ಡಿ ಭರವಸೆ ನೀಡಿದ್ದಾರೆ.
ಪ್ರಗತಿ ಭವನದ ಬೇಲಿ ತೆರವು, ಹೆಸರು ಬದಲು
ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಹೈದರಾಬಾದ್‌ನ ‘ಪ್ರಗತಿ ಭವನದ (ತೆಲಂಗಾಣ ಮುಖ್ಯಮಂತ್ರಿಯ ಸರ್ಕಾರಿ ನಿವಾಸ) ಸುತ್ತ ಇರುವ ಕಬ್ಬಿಣದ ಬೇಲಿಯನ್ನು ತೆರವುಗೊಳಿಸಲಾಗಿದೆ. ರಾಜ್ಯದ ಏಳಿಗೆಯಲ್ಲಿ ಭಾಗಿಯಾಗಲು ಬಯಸುವ ಎಲ್ಲರನ್ನೂ ಅಲ್ಲಿ ಬರಮಾಡಿಕೊಳ್ಳಲಾಗುವುದು’ ಎಂದು ರೇವಂತ್ ರೆಡ್ಡಿ ಹೇ
ಅಷ್ಟೇ ಅಲ್ಲದೆ ಪ್ರಗತಿ ಭವನವನ್ನು ‘ಜ್ಯೋತಿರಾವ್ ಫುಲೆ ಪ್ರಜಾ ಭವನ’ ಎಂದು ಮರುನಾಮಕರಣ ಮಾಡಿರುವ ರೇವಂತ್ ರೆಡ್ಡಿ, ‘ಪ್ರತಿ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಅಲ್ಲಿ ಪ್ರಜಾ ದರ್ಬಾರ್ ನಡೆಸಲಾಗುವುದು. ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲಾಗುವುದು’ಎಂದು ಘೋಷಣೆ ಮಾಡಿದ್ದಾರೆ.
ತೆಲಂಗಾಣ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ನಿನ್ನೆ (ಡಿ.7) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೈದರಾಬಾದ್‌ನ ಲಾಲ್ ಬಹದ್ದೂರ್ ಶಾಸ್ತ್ರಿ (ಎಲ್‌ಬಿ) ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಪ್ರಮಾಣ ವಚನ ಬೋಧಿಸಿದರು.
ರೇವಂತ್ ರೆಡ್ಡಿ ಜೊತೆ ಉಪಮುಖ್ಯಮಂತ್ರಿಯಾಗಿ ಮಧಿರ ಶಾಸಕ ಹಾಗೂ ದಲಿತ ನಾಯಕ ಭಟ್ಟಿ ವಿಕ್ರಮಾರ್ಕ ಮಲ್ಲು ಪದಗ್ರಹಣ ಮಾಡಿದರು. ಇನ್ನುಳಿದಂತೆ ಟಿಪಿಸಿಸಿ ಮಾಜಿ ಅಧ್ಯಕ್ಷ, ಎನ್. ಉತ್ತಮ್ ಕುಮಾರ್ ರೆಡ್ಡಿ, ಶಾಸಕರಾದ ಶ್ರೀಧರ್ ಬಾಬು, ಪೊನ್ನಂ ಪ್ರಭಾಕರ್, ಕೋಮಟಿರೆಡ್ಡಿ ವೆಂಕಟ್ ರೆಡ್ಡಿ, ದಾಮೋದರ್ ರಾಜನರಸಿಂಹ, ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ, ದಾನ ಅನಸೂಯ, ತುಮ್ಮಲ ನಾಗೇಶ್ವರ್ ರಾವ್, ಕೊಂಡ ಸುರೇಖಾ ಮತ್ತು ಜೂಪಲ್ಲಿ ಕೃಷ್ಣ ರಾವ್ ಸಂಪುಟ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.
ಪ್ರಮಾಣ ವಚನ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಇಂಧನ ಸಚಿವ ಕೆ.ಜೆ ಜಾರ್ಜ್, ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು
