ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರಿಕೆ ವಹಿಸಿ: ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು
ಕಂಪ್ಲಿ:
ತುಂಗಭದ್ರಾ ನದಿಗೆ ಹೆಚ್ಚುವರಿ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಪ್ರವಾಹದ ನೀರು ಬ್ಯಾಕ್ಟೀರಿಯಾ, ವೈರಸ್ ಮತ್ತು ಇತರೆ ರೋಗಾಣುಗಳಿಂದ ಕಲುಷಿತಗೊಂಡಿರಬಹುದಾಗಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ತಿಳಿಸಿದರು.
ಬುಧವಾರ ಕಂಪ್ಲಿ ಪಟ್ಟಣದ ಕೋಟೆ ಪ್ರದೇಶಕ್ಕೆ ಭೇಟಿ ನೀಡಿದ ಅವರು, ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದರು. ಅವರು ತಿಳಿಸಿದಂತೆ, ನೀರಿನ ಹರಿವಿನಿಂದಾಗಿ ಹಾವು, ಚೇಳು ಮುಂತಾದ ವಿಷಜಂತುಗಳು ಜನವಾಸ ಪ್ರದೇಶಗಳಿಗೆ ನುಸುಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ, ನೀರಿನ ಪ್ರವಾಹದ ಅಪಾಯದ ಸಂದರ್ಭದಲ್ಲೇ ಜನರು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಗೊಳ್ಳಬೇಕು ಎಂದು ಹೇಳಿದರು.
ಹಾವು ನಂಜು ನಿರೋಧಕ ಲಸಿಕೆ, ಓ.ಆರ್.ಎಸ್ ದ್ರಾವಣ, ಜ್ವರ ಹಾಗೂ ನೆಗಡಿ-ಕೆಮ್ಮು ಔಷಧಗಳು, ಐ.ವಿ ಫ್ಲೂಯಿಡ್, ಹ್ಯಾಲೋಜನ್ ಟ್ಯಾಬ್ಲೆಟ್, ಬ್ಲೀಚಿಂಗ್ ಪೌಡರ್ ಮುಂತಾದ ಸೌಲಭ್ಯಗಳನ್ನು ಮುಂಚಿತವಾಗಿ ಸರಬರಾಜು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಸಮುದಾಯದ ಆರೋಗ್ಯಕ್ಕಾಗಿ ಗೃಹ ಆರೋಗ್ಯ ಪರಿಶೀಲನೆ, ಗರ್ಭಿಣಿಯರ ಆರೈಕೆ, ಸುಸೂತ್ರ ಹೆರಿಗೆ ವ್ಯವಸ್ಥೆ, ತಾಯಿ ಮತ್ತು ಮಗುವಿನ ಆರೈಕೆ ಮುಂತಾದ ಆರೋಗ್ಯ ಕ್ರಮಗಳನ್ನು ಪಾಲಿಸಬೇಕೆಂದು ಸೂಚಿಸಿದರು. ಅಪಾಯದ ಪ್ರದೇಶಗಳಲ್ಲಿ ಪ್ರತಿದಿನ ಜನಾರೋಗ್ಯ ಸಮೀಕ್ಷೆ ನಡೆಸಬೇಕು. ಸಾಂಕ್ರಾಮಿಕ ರೋಗಗಳು ಹರಡದ ಮುನ್ನೆಚ್ಚರಿಕೆ ಕ್ರಮಗಳನ್ನು ತಕ್ಷಣ ಜಾರಿಗೆ ತರಬೇಕು ಎಂದು ಆರೋಗ್ಯ ಸಿಬ್ಬಂದಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ದಿಶಾ ಸಮಿತಿಯ ಸದಸ್ಯ ಎ.ಸಿ. ದಾನಪ್ಪ, ಆರೋಗ್ಯ ಮೇಲ್ವಿಚಾರಕ ಟಿ. ವಿರೂಪಾಕ್ಷಪ್ಪ, ತಾಲ್ಲೂಕ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ್ ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.