ವಸತಿ ನಿಲಯಕ್ಕೆ ಮೂಲಭೂತ ಸೌಲಭ್ಯ ಒದಗಿಸಿ, ವಾರ್ಡನ್ ಅಮಾನತು ಮಾಡಬೇಕು: ರಾಹುಲ್ ಕೊಲ್ಲೂರಕರ್ ಆಗ್ರಹ
ಯಾದಗಿರಿ, ಜುಲೈ 27 | ವರದಿ: ಸಿದ್ದಿ ಟಿವಿ
ಯಾದಗಿರಿ ನಗರದ ಗಂಜ್ ವೃತ್ತದ ಬಳಿ ಇರುವ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ (ಟೌನ್ ಯಾದಗಿರಿ)ದಲ್ಲಿ ಮಕ್ಕಳಿಗೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೇ, ನಿರ್ಲಕ್ಷ್ಯವಾಗಿ ನಿರ್ವಹಣೆ ನಡೆಯುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ವಸತಿ ನಿಲಯದ ವಾರ್ಡನ್ ನಿಂಗಣ್ಣ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂಬ ಆಗ್ರಹವನ್ನು ಅಂಬೇಡ್ಕರ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ರಾಹುಲ್ ಕೊಲ್ಲೂರಕರ್ ಮಾನ್ಯ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಮನವಿಯ ಮೂಲಕ ಸಲ್ಲಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಕೊಲ್ಲೂರಕರ್ ಅವರು, “ವಸತಿ ನಿಲಯದಲ್ಲಿ ಮಕ್ಕಳಿಗೆ ಊಟ ಸಮಯಕ್ಕೆ ಸರಿಯಾಗಿ ನೀಡಲಾಗುತ್ತಿಲ್ಲ. ಮಕ್ಕಳು ಗುಟುಕ, ಧೂಮಪಾನ ಹಾಗೂ ಕುಡಿತದಲ್ಲಿ ತೊಡಗಿರುವ ಸ್ಥಿತಿಯಿದೆ. ವಾರ್ಡನ್‌ರವರು ಇದನ್ನೆಲ್ಲಾ ನೋಡಿದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅಡುಗೆ ಸಿಬ್ಬಂದಿ, ಕಾವಲುದಾರರು ಕೂಡ ಸರಿಯಾದ ಸಮಯಕ್ಕೆ ಹಾಜರಾಗುವಂತಿಲ್ಲ,” ಎಂದು ತಿಳಿಸಿದ್ದಾರೆ.
ಸ್ವಚ್ಛತೆ ಸಂಪೂರ್ಣ ಅವ್ಯವಸ್ಥೆಯಲ್ಲಿದೆ. ವಸತಿ ನಿಲಯದ ಒಳಗೆ ಅನ್ನ, ಬೇಳೆ, ಕಸ ಹರಡಿರುವ ಸ್ಥಿತಿ ಕಂಡುಬರುತ್ತಿದೆ. ಸುತ್ತಮುತ್ತಲು ಬಟ್ಟೆ ತೊಳೆದ ನೀರು ಹಾಗೂ ಆಹಾರದ ತ್ಯಾಜ್ಯವನ್ನು ನೇರವಾಗಿ ಹೊರಗೆ ಹಾಕಲಾಗುತ್ತಿದೆ. ಇದರಿಂದ ಮಕ್ಕಳಿಗೆ ಸಂಕ್ರಮಣ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಅವರು ಎಚ್ಚರಿಸಿದರು.
“ಅಂಬೇಡ್ಕರ್ ಅವರ ಹೆಸರಿನ ಈ ವಸತಿ ನಿಲಯದಲ್ಲಿ ನಡೆಯುತ್ತಿರುವ ನಿರ್ಲಕ್ಷ್ಯವು ಅತ್ಯಂತ ದುಃಖಕರ. ವಾರ್ಡನ್ ಅವರನ್ನು ಅಮಾನತು ಮಾಡಿ, ವಸತಿ ನಿಲಯದಲ್ಲಿ ಲೈಟಿಂಗ್ ವ್ಯವಸ್ಥೆ, ಶೌಚಾಲಯ, ಮಂಚದ ಗಾದಿ, ಊಟದ ಸಭಾಂಗಣ ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ತಕ್ಷಣ ಒದಗಿಸಬೇಕು,” ಎಂಬುದಾಗಿ ರಾಹುಲ್ ಕೊಲ್ಲೂರಕರ್ ಮನವಿ ಮಾಡಿದರು.
– ಸಿದ್ದಿ ಟಿವಿ ವಾರ್ತೆ