ಧರ್ಮಸ್ಥಳ ಸಂಸ್ಥೆಯಿಂದ ಶ್ರೀ ಅಕ್ಕಮಹಾದೇವಿ ಅನುಭವ ಮಂಟಪಕ್ಕೆ ₹2 ಲಕ್ಷ DD ವಿತರಣೆ
ಕಂಪ್ಲಿ ಪಟ್ಟಣದ ಶ್ರೀ ಅಕ್ಕಮಹಾದೇವಿ ಅನುಭವ ಮಂಟಪದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ₹2 ಲಕ್ಷ ಸಹಾಯಧನ ಮಂಜೂರಾಗಿದೆ. ಕಳೆದ ತಿಂಗಳು ಮಹಿಳಾ ಮಂಡಳಿಯವರು ಧರ್ಮಸ್ಥಳಕ್ಕೆ ಸಲ್ಲಿಸಿದ್ದ ಮನವಿಗೆ ಅನುಗುಣವಾಗಿ ಪೂಜ್ಯರಿಂದ ಈ ಮೊತ್ತವನ್ನು ಮಂಜೂರಿಸಲಾಗಿದೆ.
ಇಂದು ಬಳ್ಳಾರಿ ಜಿಲ್ಲಾ ನಿರ್ದೇಶಕರಾದ ರೋಹಿತಾಕ್ಷ ಅವರು ಮಂಟಪಕ್ಕೆ ಭೇಟಿ ನೀಡಿ, ಪೂಜ್ಯರಿಂದ ಮಂಜೂರಾದ ₹2 ಲಕ್ಷ ಮೊತ್ತದ ಡಿಮಾಂಡ್ ಡ್ರಾಫ್ಟ್ ಅನ್ನು ಕಮಿಟಿಯ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ವಿತರಣೆ ಮಾಡಿ ಶುಭ ಹಾರೈಸಿದರು.ನಂತರ ಮಾತನಾಡಿದ ಅವರು,“ಕರ್ನಾಟಕ ರಾಜ್ಯಾದ್ಯಂತ ಧಾರ್ಮಿಕ ಶ್ರದ್ಧೆ–ಭಕ್ತಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ನೀಡುತ್ತಿರುವ ಕೊಡುಗೆ ಅನನ್ಯ. ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ನಿರಂತರ ಸಹಾಯ ನೀಡುತ್ತಿದ್ದು, ಕಂಪ್ಲಿ ತಾಲೂಕಿನಲ್ಲಿ ಮಾತ್ರ ಈಗಾಗಲೇ 25–30ಕ್ಕೂ ಹೆಚ್ಚು ದೇವಾಲಯಗಳ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ,” ಎಂದರು.ಅವರು ಮುಂದುವರಿಸಿ, ದೇವಾಲಯಗಳಲ್ಲಿ ಸ್ವಚ್ಛತಾ ಅಭಿಯಾನ, ಕಸ ವಿಲೇವಾರಿ ಪರಿಕರ ವಿತರಣೆ, ಹಾಗೂ ರಾಜ್ಯದ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಸ್ವಚ್ಛಪರಿಸರ ನಿರ್ಮಾಣಕ್ಕೆ ವಿಶೇಷ ಯೋಜನೆ ಕೈಗೊಂಡಿರುವುದನ್ನೂ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಂಪ್ಲಿ ತಾಲೂಕು ಯೋಜನಾಧಿಕಾರಿಗಳಾದ ರಾಘವೇಂದ್ರ, ಡಾ. ಜಗನ್ನಾಥ, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳಿ ಸದಸ್ಯರು, ಕೃಷಿ ಅಧಿಕಾರಿ ಸಂಜುಕುಮಾರ್, ವಲಯ ಮೇಲ್ವಿಚಾರಕ ಮಂಜಣ್ಣ, ಹಾಗೂ ವಲಯದ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
