ಪರೀಕ್ಷಾರ್ಥಿ ಯುವತಿ ರೈಲು ಹಳಿಗೆ ಬಿದ್ದು ದುರ್ಘಟನೆ; ಪೊಲೀಸ್ ಪೇದೆ ಕನಸಿಗೆ ತೆರೆ
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದ ಪರೀಕ್ಷಾರ್ಥಿ ಯುವತಿ ರೈಲು ಹಳಿಗೆ ಬಿದ್ದು ಮೃತಪಟ್ಟ ದುರ್ಘಟನೆ ನಡೆದಿದೆ. ಮೃತರನ್ನು ಪಲ್ಲವಿ ಕಗ್ಗಲ್ (25) ಎಂದು ಗುರುತಿಸಲಾಗಿದೆ.
ಮೃತ ಪಲ್ಲವಿ ಬಳ್ಳಾರಿ ಜಿಲ್ಲೆಯ(ಕಂಪ್ಲಿ ವಿಧಾನಸಭಾ ಕ್ಷೇತ್ರ) ಕಗ್ಗಲ್ ಗ್ರಾಮದ ನಿವಾಸಿಯಾಗಿದ್ದು, ಬಿಕಾಂ ಪದವಿ ಪೂರ್ಣಗೊಳಿಸಿದ್ದರು. ಬಿಕಾಂ ಮುಗಿಸಿದ ನಂತರ ಸರ್ಕಾರಿ ಉದ್ಯೋಗದ ಕನಸಿನೊಂದಿಗೆ 2021ರಿಂದ ಧಾರವಾಡದಲ್ಲಿ ನೆಲೆಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು.
ಪೊಲೀಸ್ ಪೇದೆ ನೇಮಕಾತಿಗೆ ಸಿದ್ಧತೆ ನಡೆಸಿದ್ದ ಪಲ್ಲವಿ, 2024ರಲ್ಲಿ ನಡೆದ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆದರೆ ಲಿಖಿತ ಪರೀಕ್ಷೆಯಲ್ಲಿ ಯಶಸ್ವಿಯಾಗಿರಲಿಲ್ಲ. ಆದರೂ ನಿರಾಶೆಗೊಳ್ಳದೆ ಮತ್ತೆ ನಡೆಯಲಿರುವ ನೇಮಕಾತಿ ಪರೀಕ್ಷೆ ಬರೆಯಲು ಸಜ್ಜಾಗುತ್ತಿದ್ದರು.
ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಶ್ರಮಿಸುತ್ತಿದ್ದ ಪಲ್ಲವಿ ಅವರ ಅಕಾಲಿಕ ನಿಧನವು ಕುಟುಂಬಸ್ಥರು, ಸ್ನೇಹಿತರು ಹಾಗೂ ಸಹಪಾಠಿಗಳಲ್ಲಿ ಆಘಾತ ಮತ್ತು ದುಃಖ ಮೂಡಿಸಿದೆ.
