ಕೋಟೆಯಲ್ಲಿ ಪಲ್ಸ್ ಪೋಲಿಯೋ ಜಾಗೃತಿ ಜಾಥಾ
ಕಂಪ್ಲಿ : ಡಿಸೆಂಬರ್ 21ರಂದು ನಡೆಯಲಿರುವ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಟ್ಟಣದ ಕೋಟೆ ಪ್ರದೇಶದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.
ಪಟ್ಟಣದ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಕಚೇರಿ ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಜಾಥಾ ಆಯೋಜಿಸಲಾಗಿತ್ತು. ಜಾಥಾಕ್ಕೆ ಪ್ರಾಥಮಿಕ ಆರೋಗ್ಯ ಮೇಲ್ವಿಚಾರಕರಾದ ಚೆನ್ನಬಸವರಾಜ ಚಾಲನೆ ನೀಡಿ ಮಾತನಾಡಿದರು.
ಪಟ್ಟಣ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಪಲ್ಸ್ ಪೋಲಿಯೋ ಬೂತ್‌ಗಳನ್ನು ತೆರೆಯಲಾಗುತ್ತಿದ್ದು, 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಸಾರ್ವಜನಿಕರು ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ತಪ್ಪದೇ ಲಸಿಕೆ ಹಾಕಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.
ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು ಹಾಗೂ ಶಾಲಾ ವಿದ್ಯಾರ್ಥಿಗಳು ಧ್ವನಿವರ್ಧಕ ಹಾಗೂ ಜಾಗೃತಿ ಫಲಕಗಳನ್ನು ಹಿಡಿದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಜನರಲ್ಲಿ ಜಾಗೃತಿ ಮೂಡಿಸಿದರು.ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು ಬಡಿಗೇರ್ ಜಿಲಾನಸಾಬ್, ಆಶಾ ಕಾರ್ಯಕರ್ತೆ ಆರ್. ವಲಿಮಾ, ಅಂಗನವಾಡಿ ಕಾರ್ಯಕರ್ತೆ ಶಿವಲೀಲಮ್ಮ, ಶಾಲಾ ಶಿಕ್ಷಕಿಯರಾದ ಶ್ವೇತಾ, ವರ್ಷಾ ಮಜುಮದಾರ, ಜೆ. ಅಕ್ಷತಾ, ಸುನೀತಾ, ಗೌಸಿಯಾ, ಕಾವ್ಯ, ಉಮಾ ಕೊಲ್ಕರಾ, ಕೆ. ಜಯಶ್ರೀ ಸೇರಿದಂತೆ ವಿಶ್ವನಾಥ, ಸುಮಂತ ಹಾಗೂ ಇತರರು ಉಪಸ್ಥಿತರಿದ್ದರು.
