ಜಂಗಮರ ಕಲ್ಗುಡಿ: ಶ್ರೀ ಮೃತ್ಯುಂಜಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಲಿಟಲ್ ಸ್ಟಾರ್ ಎಕ್ಸ್ಪೋ’ ಆಯೋಜನೆ
ಜಂಗಮರ ಕಲ್ಗುಡಿ ಗ್ರಾಮದ ಶ್ರೀ ಮೃತ್ಯುಂಜಯ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶ್ರೀ ಮೃತ್ಯುಂಜಯ ಮಠ ಸೇವಾ ಟ್ರಸ್ಟ್ ಅವರ ಸಹಯೋಗದಲ್ಲಿ ಸೋಮವಾರ ವಿದ್ಯಾರ್ಥಿಗಳಿಗಾಗಿ ‘ಲಿಟಲ್ ಸ್ಟಾರ್ ಎಕ್ಸ್ಪೋ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಶ್ರೀ ಮೃತ್ಯುಂಜಯ ಶಾಲೆಯು ಪ್ರತಿವರ್ಷ ಗ್ರಾಮೀಣ ಭಾಗದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಅದರ ಭಾಗವಾಗಿ ಈ ಲಿಟಲ್ ಸ್ಟಾರ್ ಎಕ್ಸ್ಪೋ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿಜ್ಞಾನ, ಪರಿಸರ, ಗಣಿತ ಹಾಗೂ ಮಣ್ಣಿನ ವಿಷಯಗಳಿಗೆ ಸಂಬಂಧಿಸಿದ ವಿವಿಧ ಪ್ರಯೋಗಾಲಯ ಮಾದರಿಗಳನ್ನು ತಯಾರಿಸಿ, ಅವುಗಳ ವೈಜ್ಞಾನಿಕ ವಿಶ್ಲೇಷಣೆ ಹಾಗೂ ಉಪಯೋಗದ ಕುರಿತು ವಿವರಿಸಿದರು. ಮಕ್ಕಳ ಸೃಜನಶೀಲತೆ ಮತ್ತು ಜ್ಞಾನ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸುನಿತಾ ಅವರು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮೃತ್ಯುಂಜಯ ಮಠ ಸೇವಾ ಟ್ರಸ್ಟ್ ಅಧ್ಯಕ್ಷರಾದ ಪಂಪಯ್ಯ ಸ್ವಾಮಿ ಹಿರೇಮಠ್ ಅವರು ವಹಿಸಿದ್ದರು.
ಅತಿಥಿಗಳಾಗಿ ಗಂಗಾವತಿ ಚಿಕ್ಕ ಜಂತಕಲ್ ಕ್ಲಸ್ಟರ್‌ನ ಸಿ.ಆರ್.ಪಿ. ಎಸ್.ಎಸ್. ಗೌಡ, ಜಂಗಮರ ಕಲ್ಗುಡಿ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳಾದ ದುರ್ಗೇಶ್, ಎರಡನೇ ವಾರ್ಡ್ ಸದಸ್ಯೆ ಶ್ರೀಮತಿ ಶೃತಿ ಧನಂಜಯ್ ಉಪಸ್ಥಿತರಿದ್ದರು.
ಇದೇ ವೇಳೆ ಶಾಲೆಯ ಪಾಲಕರ ಮಂಡಳಿಯ ಸದಸ್ಯರಾದ ಚಿದಂಬರ ಹಾಗೂ ಯೂಸುಫ್, ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಲಕ್ಷ್ಮೀದೇವಿ, ಸಹ ಶಿಕ್ಷಕರಾದ ದಿಲ್ಶಾದ್, ನಾಗರತ್ನ, ಶ್ರೀದೇವಿ ಸುವರ್ಣ, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಸರ್ವಜ್ಞ ಮೂರ್ತಿ ಸೇರಿದಂತೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಮತ್ತು ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ಸ್ಥಳೀಯ ಪ್ರತಿನಿಧಿ
