ಭಗವಾನ್ ಬುದ್ಧ ಜಯಂತಿ ಆಚರಣೆ
ಕಂಪ್ಲಿ ತಾಲೂಕು ಆಡಳಿತ ವತಿಯಿಂದ ಭಗವಾನ್ ಬುದ್ಧ ಜಯಂತಿಯನ್ನು ತಾಲೂಕು ಕಚೇರಿ ಸಭಾಂಗಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಬುದ್ಧ ಅನುಯಾಯಿಗಳು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿ, ಭಗವಾನ್ ಬುದ್ಧರ ತತ್ವಗಳನ್ನು ಸ್ಮರಿಸಿದರು. ಮಾತನಾಡಿದ ಅವರು, ಭಗವಾನ್ ಬುದ್ಧರು ಶಾಂತಿ, ಅಹಿಂಸೆ, ಕರುಣೆ ಮತ್ತು ಸಮಾನತೆಯ ಸಂದೇಶವನ್ನು ಜಗತ್ತಿಗೆ ನೀಡಿದ ಮಹಾನ್ ತತ್ವಜ್ಞಾನಿಯಾಗಿದ್ದು, ಅವರ ಉಪದೇಶಗಳು ಮಾನವ ಜೀವನವನ್ನು ಸುಧಾರಿಸುವ ದಾರಿದೀಪವಾಗಿವೆ ಎಂದು ಹೇಳಿದರು.
ಕ್ರಿ.ಪೂ. 6ನೇ ಶತಮಾನದಲ್ಲಿ ಜನಿಸಿದ ಬುದ್ಧರು, ಜೀವನದ ದುಃಖಗಳ ಕಾರಣ ಮತ್ತು ಅವುಗಳಿಂದ ಮುಕ್ತಿ ಪಡೆಯುವ ಮಾರ್ಗವನ್ನು ಬೋಧಿಸಿದರು. ಅಷ್ಟಾಂಗ ಮಾರ್ಗ ಮತ್ತು ಮಧ್ಯಮ ಮಾರ್ಗದ ಮೂಲಕ ಸತ್ಯ, ಧರ್ಮ ಮತ್ತು ನೀತಿಯ ಜೀವನ ನಡೆಸಬೇಕು ಎಂಬ ಸಂದೇಶವನ್ನು ನೀಡಿದ್ದಾರೆ. ಎಲ್ಲ ಜೀವಿಗಳ ಮೇಲೂ ಕರುಣೆ ತೋರಬೇಕು, ದ್ವೇಷವನ್ನು ಪ್ರೀತಿ ಮೂಲಕ ಗೆಲ್ಲಬೇಕು ಎಂಬುದೇ ಅವರ ಬೋಧನೆಯ ಸಾರವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಬುದ್ಧರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಆಡಳಿತದ ಅಧಿಕಾರಿಗಳು, ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
