ರಜಪೂತ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಮನವಿ
ಕಂಪ್ಲಿ: ರಜಪೂತ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಿ ಕಂಪ್ಲಿ ತಾಲೂಕು ರಜಪೂತ ಸಮಾಜದ ವತಿಯಿಂದ ತಹಶೀಲ್ದಾರ್ ಮಂಜುನಾಥ್ ನಾಯಕ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ತಾಲೂಕು ರಜಪೂತ ಸಮಾಜದ ಅಧ್ಯಕ್ಷ ಇಂದ್ರಜಿತ್ ಸಿಂಗ್, ರಾಜ್ಯದಲ್ಲಿ ಲಕ್ಷಾಂತರ ಜನಸಂಖ್ಯೆ ಹೊಂದಿರುವ ರಜಪೂತ ಸಮಾಜವು ಆರ್ಥಿಕ, ಶೈಕ್ಷಣಿಕ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಯುವ ಪೀಳಿಗೆಗೆ ಅಗತ್ಯ ಪ್ರೋತ್ಸಾಹ ಮತ್ತು ಮಾರ್ಗದರ್ಶನದ ಕೊರತೆಯಿಂದ ಸಮಾಜದ ಸಮಗ್ರ ಅಭಿವೃದ್ಧಿಗೆ ಅಡಚಣೆ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ರಜಪೂತ ಸಮಾಜದ ಅಭಿವೃದ್ಧಿಗಾಗಿ ಸರ್ಕಾರವು "ರಜಪೂತ ಅಭಿವೃದ್ಧಿ ಮಂಡಳಿ"ಯನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಯಾದಗಿರಿ ಜಿಲ್ಲಾಡಳಿತದ ಉಸ್ತುವಾರಿಯಲ್ಲಿ ರಜಪೂತ ಸಮಾಜದ ಕೌಟುಂಬಿಕ ಸಮೀಕ್ಷೆ ಹಾಗೂ ಡಿಜಿಟಲ್ ನೋಂದಣಿ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಅದರ ಸಮಗ್ರ ವರದಿ ಬೆಂಗಳೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗದ ಪರಿಶೀಲನೆಯಲ್ಲಿದೆ. ಈ ಪ್ರಕ್ರಿಯೆಯಿಂದ ರಾಜ್ಯದಾದ್ಯಂತ ರಜಪೂತ ಸಮಾಜ ಒಗ್ಗಟ್ಟಿನಿಂದ ಅಭಿವೃದ್ಧಿಯತ್ತ ಹೆಜ್ಜೆ ಇಟ್ಟಿದೆ ಎಂದು ಅವರು ತಿಳಿಸಿದರು.
ರಾಜ್ಯದ ರಜಪೂತ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗಕ್ಕೆ ತಾಲೂಕು ಆಡಳಿತದ ಪರವಾಗಿ ತುರ್ತು ಶಿಫಾರಸು ಪತ್ರ ಕಳುಹಿಸಬೇಕು ಎಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ರಜಪೂತ ಸಮಾಜದ ಅಧ್ಯಕ್ಷ ಇಂದ್ರಜಿತ್ ಸಿಂಗ್, ಲಕ್ಷ್ಮಣ ಸಿಂಗ್, ತುಕಾರಾಂ ಸಿಂಗ್, ವಿಶ್ವನಾಥ್ ಸಿಂಗ್, ಜಮಾನ ಸಿಂಗ್, ಪೃಥ್ವಿರಾಜ್ ಸಿಂಗ್, ವಿನಯ್ ಸಿಂಗ್, ಮನ್ ಸಿಂಗ್, ಗಣಪತಿ ಸಿಂಗ್, ಆನ್ ಸಿಂಗ್ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
