ಈದ್ ಮಿಲಾದ್ ಪ್ರಯುಕ್ತ ವೃದ್ಧಾಶ್ರಮದಲ್ಲಿ ಸೌಹಾರ್ದಯುತ ಅನ್ನದಾಸೋಹ ಸೇವೆ
ಕಂಪ್ಲಿ: ಪವಿತ್ರ ಈದ್ ಮಿಲಾದ್ ಹಬ್ಬದ ಅಂಗವಾಗಿ ಕಂಪ್ಲಿ ಹಾರ್ಡ್ ವೇರ್ ವತಿಯಿಂದ ಕಂಪ್ಲಿ–ಗಂಗಾವತಿ ರಸ್ತೆಯಲ್ಲಿರುವ ನವಜೀವನ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿರುವ ಹಿರಿಯ ಜೀವಿಗಳಿಗೆ ಅನ್ನದಾಸೋಹ ಸೇವೆಯನ್ನು ಶ್ರದ್ಧೆ ಹಾಗೂ ಸೌಹಾರ್ದತೆಯಿಂದ ಹಮ್ಮಿಕೊಳ್ಳಲಾಯಿತು.
ಪ್ರವಾದಿ ಮೊಹಮ್ಮದ್ ಅವರ ಜನ್ಮದಿನೋತ್ಸವದ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಶ್ರಮದ ಹಿರಿಯರಿಗೆ ಪೌಷ್ಟಿಕ ಹಾಗೂ ಮೃದುವಾದ ಹಬ್ಬದ ವಿಶೇಷ ಭೋಜನವನ್ನು ಕಂಪ್ಲಿ ಹಾರ್ಡ್ ವೇರ್ ಮಾಲೀಕರಾದ ಎಸ್.ಕೆ. ಅಜ್ಜುರುದ್ಧಿನ್ ಹಾಗೂ ಎಸ್.ಕೆ. ಇಂತಿಯಾಜ್ ಸ್ವತಃ ಬಡಿಸಿ ಸತ್ಕರಿಸಿದರು.
ಆಹಾರ ವಿತರಿಸುವುದರ ಜೊತೆಗೆ ಹಿರಿಯರೊಂದಿಗೆ ಆತ್ಮೀಯವಾಗಿ ಮಾತನಾಡಿ, ಅವರ ಆರೋಗ್ಯ ವಿಚಾರಿಸಿ, ಕೆಲಕಾಲ ಸಮಯ ಕಳೆದರು. ಈ ಮೂಲಕ ಹಬ್ಬದ ಸಂಭ್ರಮವನ್ನು ಹಿರಿಯರೊಂದಿಗೆ ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಕೆ. ಇಂತಿಯಾಜ್, “ಹಬ್ಬ ಎಂದರೆ ಕೇವಲ ಸಂಭ್ರಮಿಸುವುದಷ್ಟೇ ಅಲ್ಲ. ಸಮಾಜದಲ್ಲಿರುವ ನಿರಾಶ್ರಿತರು ಹಾಗೂ ಹಿರಿಯರಿಗೆ ಪ್ರೀತಿ ಮತ್ತು ಆಸರೆ ನೀಡುವುದೇ ನಿಜವಾದ ಹಬ್ಬದ ಸಂದೇಶ. ಹಿರಿಯರ ಮುಖದಲ್ಲಿ ಮೂಡಿದ ನಗು ನಮಗೆ ತೃಪ್ತಿ ತಂದಿದೆ” ಎಂದು ಹೇಳಿದರು.
ಆಶ್ರಮದ ವ್ಯವಸ್ಥಾಪಕರು ಹಾಗೂ ಹಿರಿಯ ನಾಗರಿಕರು ಕಂಪ್ಲಿ ಹಾರ್ಡ್ ವೇರ್‌ನ ಈ ನಿಸ್ವಾರ್ಥ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ, ಹಾರೈಸಿದರು.
ಕಾರ್ಯಕ್ರಮದಲ್ಲಿ ಬಡಿಗೇರ್ ಜಿಲಾನಸಾಬ್ ಹಾಗೂ ಆಶ್ರಮದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
