ಮಾಜಿ ಶಾಸಕ ಸುರೇಶ್ ಬಾಬು ಆರೋಪಗಳು ರಾಜಕೀಯ ಪ್ರೇರಿತ : ದೊಡ್ಡ ಬಸವರಾಜ್ ಬಡಗಿ
ಕಾಂಗ್ರೆಸ್ ಮುಖಂಡರ ಖಂಡನೆ – ಆರೋಪಗಳಿಗೆ ಅಭಿವೃದ್ಧಿ ಕಾರ್ಯಗಳ ಮೂಲಕವೇ ಉತ್ತರ
ರೈತರ ಸಮಸ್ಯೆ, ಕಾಲುವೆಗಳಿಗೆ ನೀರು ಹಾಗೂ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಮಾಜಿ ಶಾಸಕ ಟಿ.ಎಚ್. ಸುರೇಶ್ ಬಾಬು ಅವರು ಶಾಸಕ ಜೆ.ಎನ್. ಗಣೇಶ್ ವಿರುದ್ಧ ಮಾಡಿರುವ ಆರೋಪಗಳು ರಾಜಕೀಯ ಪ್ರೇರಿತ ಹಾಗೂ ವಾಸ್ತವಾಂಶಗಳಿಗೆ ವಿರುದ್ಧವಾಗಿವೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ಬೆಂಬಲಿಗ ದೊಡ್ಡ ಬಸವರಾಜ್ ಬಡಗಿ ಖಂಡಿಸಿದ್ದಾರೆ.
ಕಾಲುವೆಗಳಿಗೆ ನೀರು ಹರಿಸುವುದು ಜಲಾಶಯಗಳ ನೀರಿನ ಮಟ್ಟ, ನೀರಿನ ಲಭ್ಯತೆ, ನೀರಾವರಿ ಇಲಾಖೆಯ ತಾಂತ್ರಿಕ ನಿರ್ಧಾರಗಳು ಹಾಗೂ ತುಂಗಭದ್ರಾ ನೀರಿನ ಹಂಚಿಕೆ ವಿಚಾರದಲ್ಲಿ ಮೂರು ರಾಜ್ಯಗಳ ಸಮನ್ವಯದ ಮೇಲೆ ಅವಲಂಬಿತವಾಗಿದೆ. ಈ ವಾಸ್ತವಾಂಶ ತಿಳಿದಿದ್ದರೂ ಸಂಪೂರ್ಣ ಹೊಣೆಯನ್ನು ಶಾಸಕರ ಮೇಲೆ ಹೊರಿಸುವುದು ಜನರನ್ನು ದಾರಿ ತಪ್ಪಿಸುವ ಪ್ರಯತ್ನವಾಗಿದೆ ಎಂದು ಅವರು ಆರೋಪಿಸಿದರು.
ರೈತರ ಸಮಸ್ಯೆ ಪರಿಹಾರಕ್ಕೆ ಸಹಕರಿಸುವ ಬದಲು ಜನರಲ್ಲಿ ಪ್ರಚೋದನೆ ಹಾಗೂ ದ್ವೇಷದ ವಾತಾವರಣ ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ ಎಂದು ಬಸವರಾಜ್ ಬಡಗಿ ಆಕ್ಷೇಪಿಸಿದರು.
ಶಾಸಕ ಜೆ.ಎನ್. ಗಣೇಶ್ ಅವರು ರೈತರ ನೀರಾವರಿ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರವಾಗಿ ಚರ್ಚಿಸುತ್ತಿದ್ದು, ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಹಾಗೂ ರೈತರ ಸಮಸ್ಯೆಗಳ ಕುರಿತು ಯಾವುದೇ ಬಹಿರಂಗ ಚರ್ಚೆಗೆ ಶಾಸಕರು ಸಿದ್ಧರಾಗಿದ್ದಾರೆ ಎಂದು ಅವರು ಹೇಳಿದರು.
“ಸುಳ್ಳು ಆರೋಪಗಳಿಗೆ ಉತ್ತರ ನೀಡುವುದಕ್ಕಿಂತ ಅಭಿವೃದ್ಧಿ ಕೆಲಸಗಳ ಮೂಲಕವೇ ಉತ್ತರ ನೀಡುತ್ತೇವೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಆದ್ಯತೆ. ರಾಜಕೀಯ ಕಾರಣಕ್ಕಾಗಿ ರೈತರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನವನ್ನು ಜನರು ಒಪ್ಪುವುದಿಲ್ಲ” ಎಂದು ಶಾಸಕ ಜೆ.ಎನ್. ಗಣೇಶ್ ಅವರ ಬೆಂಬಲಿಗರು ತಿಳಿಸಿದ್ದಾರೆ.
ಕಾಲುವೆ ನೀರು, ರೈತರ ಸಮಸ್ಯೆ ಹಾಗೂ ಕ್ಷೇತ್ರದ ಅಭಿವೃದ್ಧಿ ಕುರಿತು ಯಾವುದೇ ಬಹಿರಂಗ ಚರ್ಚೆಗೆ ಶಾಸಕ ಜೆ.ಎನ್. ಗಣೇಶ್ ಸಿದ್ಧರಾಗಿದ್ದಾರೆ. ಆರೋಪಗಳಿಂದ ಕ್ಷೇತ್ರದ ಅಭಿವೃದ್ಧಿಯ ವೇಗವನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
