ವೃದ್ಧೆಯ ಡಬ್ಬಿ ಅಂಗಡಿಯಲ್ಲಿ ಕಳ್ಳತನ : ₹8 ಸಾವಿರ ನಗದು, ₹2 ಸಾವಿರ ಮೌಲ್ಯದ ಸಾಮಗ್ರಿ ಕಳವು
ಕಂಪ್ಲಿ ನಗರದ ಶ್ರೀ ಸೋಮಪ್ಪನ ದೇವಸ್ಥಾನದ ಕ್ರಾಸ್ ಬಳಿ ಜೀವನೋಪಾಯಕ್ಕಾಗಿ ಡಬ್ಬಿ ಅಂಗಡಿ ನಡೆಸುತ್ತಿದ್ದ 70 ವರ್ಷದ ಲಕ್ಷ್ಮೀದೇವಿ ಎಂಬ ವೃದ್ಧೆಯ ಅಂಗಡಿಯಲ್ಲಿ (ಅ.14)ನಿನ್ನೆ ರಾತ್ರಿ ವೇಳೆ ಕಳ್ಳತನ ನಡೆದಿದೆ.
ಅಂಗಡಿಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಬೆಂಕಿ ಹಚ್ಚಿ ಸುಟ್ಟು, ಬಳಿಕ ಬೀಗವನ್ನು ಹೊಡೆದು ಕಳ್ಳರು ಅಂಗಡಿಯೊಳಗೆ ಪ್ರವೇಶಿಸಿದ್ದಾರೆ ಎನ್ನಲಾಗಿದೆ. ಅಂಗಡಿಯಲ್ಲಿದ್ದ ಸುಮಾರು ₹8 ಸಾವಿರ ನಗದು ಹಾಗೂ ₹2 ಸಾವಿರ ಮೌಲ್ಯದ ಸಾಮಗ್ರಿಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ವೃದ್ಧೆಯ ಜೀವನೋಪಾಯಕ್ಕೆ ಆಧಾರವಾಗಿದ್ದ ಅಂಗಡಿಯಲ್ಲೇ ಕಳ್ಳತನ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಘಟನೆ ಕುರಿತು ಕಂಪ್ಲಿ ಪೊಲೀಸರ ಗಮನಕ್ಕೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಕಳ್ಳತನದ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ ಎನ್ನಲಾಗಿದೆ.
