Ballari : ಗಣೇಶ ಹಬ್ಬಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್: ಡಿಜೆ ಸೌಂಡ್ ಸಿಸ್ಟಮ್ ಹಾಗೂ ಮದ್ಯ ಮಾರಾಟಕ್ಕೆ ನಿಷೇಧ


ಗಣೇಶ ಹಬ್ಬಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್: ಡಿಜೆ ಸೌಂಡ್ ಸಿಸ್ಟಮ್ ಹಾಗೂ ಮದ್ಯ ಮಾರಾಟಕ್ಕೆ ನಿಷೇಧ

ಬಳ್ಳಾರಿ, ಸೆ.16: ಗಣೇಶ ಹಬ್ಬವನ್ನು ಶಾಂತಿಯುತ ಹಾಗೂ ಸುರಕ್ಷಿತವಾಗಿ ಆಚರಿಸುವ ಉದ್ದೇಶದಿಂದ ಬಳ್ಳಾರಿ ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದು, ಡಿಜೆ ಸೌಂಡ್ ಸಿಸ್ಟಮ್ ಬಳಕೆ ಹಾಗೂ ನಿರ್ದಿಷ್ಟ ದಿನಗಳಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈ ಬಾರಿ ಒಟ್ಟು 1,786 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಸಾರ್ವಜನಿಕರ ರಕ್ಷಣೆ ಮತ್ತು ಹಬ್ಬದ ಸುಗಮ ಆಚರಣೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಭದ್ರತೆಗಾಗಿ ನಿಯೋಜನೆಗೊಂಡ ಸಿಬ್ಬಂದಿ

  • 4 ಡಿಎಸ್‌ಪಿ
  • 17 ಸಿಪಿಐ/ಪಿಐ
  • 40 ಪಿಎಸ್‌ಐ
  • 78 ಎಎಸ್‌ಐ
  • 470 ಹೆಡ್ ಕಾನ್‌ಸ್ಟೇಬಲ್/ಕಾನ್‌ಸ್ಟೇಬಲ್
  • 500 ಗೃಹರಕ್ಷಕ ಸಿಬ್ಬಂದಿ
  • 3 ಕೆಎಸ್‌ಆರ್‌ಪಿ ತುಕಡಿಗಳು
  • 10 ಡಿಎಆರ್ ತುಕಡಿಗಳು

ಗಣೇಶ ಮೂರ್ತಿಗಳ ಮೆರವಣಿಗೆ ಮತ್ತು ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಡ್ರೋನ್ ಕ್ಯಾಮೆರಾಗಳ ಮೂಲಕ ನಿರಂತರ ನಿಗಾವಹಿಸಲಾಗುತ್ತಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಅಥವಾ ಸಾರ್ವಜನಿಕ ಶಾಂತಿ ಕದಡುವ ಸಂದೇಶ, ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಕೆಲವು ಗ್ರಾಮಗಳಲ್ಲಿ ಪ್ರತಿಷ್ಠಾಪನೆ ಮತ್ತು ಮೆರವಣಿಗೆ ನಿಷೇಧ

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕಂಪ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ 15-ಗೋನಾಳ್, 10-ಮುದ್ದಾಪುರ ಹಾಗೂ ಕುಡಿತಿನಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಳ್ಳಿ ಗ್ರಾಮಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಮೆರವಣಿಗೆಯನ್ನು ನಿಷೇಧಿಸಲಾಗಿದೆ.

ಡಿಜೆ ಸೌಂಡ್ ಸಿಸ್ಟಮ್ ಸಂಪೂರ್ಣ ನಿಷೇಧ

ಸೆಪ್ಟೆಂಬರ್ 14ರಿಂದ ಗೌರಿ-ಗಣೇಶ ಹಬ್ಬ ಮುಕ್ತಾಯವಾಗುವವರೆಗೆ ಜಿಲ್ಲೆಯಾದ್ಯಂತ ಡಿಜೆ, ಹೈ-ಬಾಸ್ ಸೌಂಡ್ ಸಿಸ್ಟಮ್, ಡಿಜೆ ಬಾಕ್ಸ್ ಸೇರಿದಂತೆ ಕರ್ಕಶ ಶಬ್ದ ಉಂಟುಮಾಡುವ ಯಾವುದೇ ಧ್ವನಿವರ್ಧಕ ಉಪಕರಣಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಮದ್ಯ ಮಾರಾಟ ಮತ್ತು ಸಾಗಣೆಗೆ ನಿರ್ಬಂಧ

ಹಬ್ಬದ ಸಂದರ್ಭಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕೆಳಕಂಡ ಪ್ರದೇಶಗಳಲ್ಲಿ ಮದ್ಯ ಮಾರಾಟ, ಸಾಗಣೆ ಹಾಗೂ ಮದ್ಯದ ಅಂಗಡಿ-ರೆಸ್ಟೋರೆಂಟ್‌ಗಳನ್ನು ತೆರೆಯುವುದನ್ನು ನಿಷೇಧಿಸಲಾಗಿದೆ:

  • 3ನೇ ಮತ್ತು 5ನೇ ದಿನ: ಜಿಲ್ಲೆಯಾದ್ಯಂತ
  • 7ನೇ ದಿನ: ಬಳ್ಳಾರಿ ನಗರ ವ್ಯಾಪ್ತಿ
  • 11ನೇ ದಿನ: ಸಿರುಗುಪ್ಪ ನಗರ ಹಾಗೂ ಸುತ್ತಮುತ್ತ 10 ಕಿ.ಮೀ ವ್ಯಾಪ್ತಿ
  • 13ನೇ ದಿನ: ಕಂಪ್ಲಿ, ತೆಕ್ಕಲಕೋಟೆ ಪಟ್ಟಣ ಹಾಗೂ ಸುತ್ತಮುತ್ತ 10 ಕಿ.ಮೀ ವ್ಯಾಪ್ತಿ

ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಸಾರ್ವಜನಿಕರು ಪೊಲೀಸ್ ಇಲಾಖೆಯ ಸೂಚನೆಗಳನ್ನು ಪಾಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಮನವಿ ಮಾಡಿದ್ದಾರೆ.


Siddi TV News Desk

Previous Post Next Post

Contact Form

f="https://unpkg.com/video.js/dist/video-js.css" rel="stylesheet">