Kampli : ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ ಇಂಜಿನಿಯರ್ಸ್ ಡೇ ಆಚರಣೆ

ಕಂಪ್ಲಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ ಇಂಜಿನಿಯರ್ಸ್ ಡೇ ಆಚರಣೆ

ಕಂಪ್ಲಿ, ಸೆ.15: ಇಂಜಿನಿಯರ್ಸ್ ಡೇ ಅಂಗವಾಗಿ ಕಂಪ್ಲಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ (ರಿ.) ವತಿಯಿಂದ ಇಂಜಿನಿಯರ್ಸ್ ಡೇ ಆಚರಿಸಿ, ಸಂಘದ ಅಧಿಕೃತ ಕಾರ್ಯಾರಂಭಕ್ಕೆ ಚಾಲನೆ ನೀಡಲಾಯಿತು. ಈ ಮೂಲಕ ತಾಲೂಕಿನ ಸಿವಿಲ್ ಇಂಜಿನಿಯರ್‌ಗಳನ್ನು ಒಂದೇ ವೇದಿಕೆಯಡಿ ಸಂಘಟಿಸುವ ಮಹತ್ವದ ಹೆಜ್ಜೆ ಇಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ Er. ತುಕಾರಾಮ, ಉಪಾಧ್ಯಕ್ಷರಾಗಿ Er. ಅಬ್ದುಲ್ ಶಾರುಖ್, ಕಾರ್ಯದರ್ಶಿಯಾಗಿ Er. ಯು.ಎಸ್. ಅಖಿಲೇಶ್, ಜಂಟಿ ಕಾರ್ಯದರ್ಶಿಯಾಗಿ Er. ಮನೋಜ್ ಕುಮಾರ್ ಹಾಗೂ ಖಜಾಂಚಿಯಾಗಿ Er. ಇ. ಜನಾರ್ಧನ್ ಆಯ್ಕೆಯಾಗಿದ್ದಾರೆ. ಜೊತೆಗೆ Er. ಎಸ್.ಎ. ಸಾಯಿ ಪ್ರಕಾಶ್, Er. ಪವನ್, Er. ಟಿ. ಶಿವಶಂಕರ, Er. ಜಾಫರ್ ಸಾದಿಕ್, ತನ್ವೀರ್ ಬಾಷಾ ಹಾಗೂ ಟಿ. ಆಕಾಶ್ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ.

ತಾಲೂಕಿನ ವಿವಿಧ ಕಾಮಗಾರಿಗಳಲ್ಲಿ ಸ್ಥಳೀಯ ಸಿವಿಲ್ ಇಂಜಿನಿಯರ್‌ಗಳಿಗೆ ಆದ್ಯತೆ ಒದಗಿಸುವುದು, ಇಂಜಿನಿಯರ್‌ಗಳ ಏಕತೆಗಾಗಿ ವೇದಿಕೆ ನಿರ್ಮಿಸುವುದು, ಗುಣಮಟ್ಟದ ನಿರ್ಮಾಣ ಹಾಗೂ ಸುರಕ್ಷತಾ ಮಾನದಂಡಗಳನ್ನು ಉತ್ತೇಜಿಸುವುದು ಮತ್ತು ಸರ್ಕಾರ ಸೇರಿದಂತೆ ವಿವಿಧ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ತಾಲೂಕಿನ ಅಭಿವೃದ್ಧಿಗೆ ಕೈಜೋಡಿಸುವುದು ಸಂಘದ ಪ್ರಮುಖ ಉದ್ದೇಶಗಳಾಗಿವೆ ಎಂದು ಪದಾಧಿಕಾರಿಗಳು ತಿಳಿಸಿದರು.

ಸಾರ್ವಜನಿಕರಿಗೆ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದ ತಾಂತ್ರಿಕ ಸಲಹೆಗಳನ್ನು ನೀಡುವುದು, ಹೊಸ ಪರಿಕಲ್ಪನೆಗಳು, ಸ್ಟಾರ್ಟ್‌ಅಪ್‌ಗಳು ಹಾಗೂ ಪರಿಸರ ಸ್ನೇಹಿ ಯೋಜನೆಗಳಿಗೆ ಪ್ರೋತ್ಸಾಹ ನೀಡುವುದು ಸಂಘದ ಧ್ಯೇಯವಾಗಿದೆ. ಈ ಮೂಲಕ ನಿರ್ಮಾಣ ಕ್ಷೇತ್ರದಲ್ಲಿ ವೃತ್ತಿಪರ ಗುಣಮಟ್ಟವನ್ನು ಹೆಚ್ಚಿಸಿ ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಸೇವೆ ಒದಗಿಸಲು ಸಂಘ ಮುಂದಾಗಿದೆ.

ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಆಚರಿಸಲ್ಪಡುವ ಇಂಜಿನಿಯರ್ಸ್ ಡೇ ಸಂದರ್ಭದಲ್ಲಿ ಸಂಘದ ಅಧಿಕೃತ ಕಾರ್ಯಾರಂಭ ನಡೆದಿರುವುದು ವಿಶೇಷವಾಗಿದೆ. ಸರ್ ಎಂ. ವಿಶ್ವೇಶ್ವರಯ್ಯ ಅವರ ಆದರ್ಶಗಳನ್ನು ಅನುಸರಿಸಿಕೊಂಡು ಕಂಪ್ಲಿ ತಾಲೂಕಿನ ನಿರ್ಮಾಣ ಹಾಗೂ ಅಭಿವೃದ್ಧಿ ಕ್ಷೇತ್ರಕ್ಕೆ ಸಂಘಟಿತವಾಗಿ ಸೇವೆ ಸಲ್ಲಿಸುವ ಸಂಕಲ್ಪವನ್ನು ಸದಸ್ಯರು ವ್ಯಕ್ತಪಡಿಸಿದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">