ಕುಕನೂರು : ಕುಕನೂರು ತಾಲೂಕು ಆಡಳಿತ ಸೌದ ನಿರ್ಮಾಣಕ್ಕೆ 9.95 ಕೋಟಿ ಮಂಜೂರಾತಿ ದೊರೆತಿದ್ದು ಶೀಘ್ರದಲ್ಲಿ ಅಡಿಗಲ್ಲು ಕಾರ್ಯಕ್ರಮ ಮಾಡಲು ಸಚಿವ ಹಾಲಪ್ಪ ಆಚಾರ್ ಅವರು ಸಿ ಎಂ ಬೊಮ್ಮಾಯಿ ಅವರನ್ನು ಎದರುನೋಡುತ್ತಿದ್ದು ಅವರ ಡೇಟ್ ಗಾಗಿ ಕಾಯುತ್ತಿದ್ದಾರೆ.
ಕುಕನೂರು ತಾಲೂಕಿನ ನೂತನ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಈಗಾಗಲೇ ಕೊಪ್ಪಳ ರಸ್ತೆಯಲ್ಲಿ 9.12 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು ಆಡಳಿತ ಕಟ್ಟಡಕ್ಕೆ 9.95 ಕೋಟಿ ಅನುದಾನ ದೊರೆತಿದೆ.
ಇದರ ಜೊತೆಗೆ 9.26 ಎಕರೆ ಪ್ರದೇಶದಲ್ಲಿ 5.92 ಕೋಟಿ ರೂ ವೆಚ್ಚದಲ್ಲಿ ನೂತನ ತಾಲೂಕು ಕ್ರೀಡಾಂಗಣ ನಿರ್ಮಾಣವಾಗಲಿದೆ.
ಅಲ್ಲದೇ ಕುಕನೂರು ಪಟ್ಟಣದ 19 ನೇ ವಾರ್ಡ್ ನಲ್ಲಿ ನೂತನ ಪದವಿ ಪೂರ್ವ ಕಾಲೇಜು ಕಟ್ಟಡ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಿದ್ದವಾಗಿದೆ.
ಈ ಮೂರೂ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಕರೆಸಿ ಒಂದು ದೊಡ್ಡ ಪ್ರಮಾಣದ ಸಮಾರಂಭ ಮಾಡಲು ಬಿಜೆಪಿ ಯಲಬುರ್ಗಾ ಮಂಡಲ, ಮತ್ತು ಸ್ಥಳೀಯ ಶಾಸಕರು ಸಿದ್ಧತೆ ಮಾಡಿಕೊಂಡಿದ್ದು ಸಿ ಎಂ ಬೊಮ್ಮಾಯಿ ಅವರ ಡೇಟ್ ಗಾಗಿ ಎದುರು ನೋಡುತ್ತಿದೆ. ನೀತಿ ಸಂಹಿತೆ ಜಾರಿ ಮುನ್ನವೇ ಕಾರ್ಯಕ್ರಮ ಮಾಡುವ ಬಗ್ಗೆ ಯಲಬುರ್ಗಾ ಬಿಜೆಪಿ ಮಂಡಲ ಆಲೋಚಿಸುತ್ತಿದ್ದು ದಿನಾಂಕ ನಿಗದಿಯಾದ ಮೇಲೆ ಶೀಘ್ರದಲ್ಲಿ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದು ತಿಳಿದುಬಂದಿದೆ.
ವರದಿ : ಈರಯ್ಯ ಕುರ್ತಕೋಟಿ
Tags
ರಾಜಕೀಯ