ಗಣಿನಾಡಲ್ಲಿ ಚಿಗುರೊಡೆದ ‘ಮುಂಗಾರು’ ಬಿತ್ತನೆ; ರೈತರಲ್ಲಿ ಆಶಾಭಾವನೆ
ಮುಂಗಾರು ಆರಂಭಗೊಂಡಿದ್ದರಿಂದ ರೈತಾಪಿ ವರ್ಗ ಜಮೀನಿನಲ್ಲಿ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುವ ಮೂಲಕ ಬೆಳೆ ಬೆಳೆಯಲು ಸಜ್ಜಾಗುತ್ತಿದೆ. ಪ್ರಸಕ್ತ ಮುಂಗಾರಿನಲ್ಲಿ ಬಳ್ಳಾರಿ ಜಿಲ್ಲಾ ಕೃಷಿ ಇಲಾಖೆಯಿಂದ 1.73,897 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ರಸಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ರೈತರಿಗೆ ಕೃ ಷಿ ಚಟುವಟಿಕೆ ಕೈಗೊಳ್ಳಲು ಯಾವುದೇ ಕೊರತೆಯಾಗದಂತೆ ಅಗತ್ಯ ಸಿದ್ಧತೆ ಕೈಗೊಂಡಿದೆ.
ಬಳ್ಳಾರಿ: ಕಳೆದ ಒಂದು ವರ್ಷದಿಂದ ಮಳೆಯಿಲ್ಲದೆ ಬರಗಾಲ ಆವರಿಸಿ ಮಂಕಾಗಿದ್ದ ಗಣಿ ಜಿಲ್ಲೆಯ ರೈತಾಪಿ ವರ್ಗಕ್ಕೆ ಜಿಲ್ಲೆಯಲ್ಲಿ ವಾರದಿಂದ ಸುರಿಯುತ್ತಿರುವ ಮುಂಗಾರು ಮಳೆಯಿಂದ ಕೃಷಿಚಟುವಟಿಕೆ ಆರಂಭದ ಆಶಾಭಾವನೆ ಮೂಡಿಸಿದೆ. ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಳ್ಳುವಲ್ಲಿ ನಿರತರಾಗಿದ್ದಾರೆ.
ಮಳೆಯ ಅವಕೃಪೆಯಿಂದ ವರ್ಷದಿಂದ ಮುಂಗಾರು, ಹಿಂಗಾರು ಬಿತ್ತನೆಯಿಲ್ಲದೆ ರೈತರ ಜಮೀನುಗಳು ಮಳೆಗಾಗಿ ಎದುರು ನೋಡುವಂತಾಗಿತ್ತು.ಇದರಿಂದ ಕೃಷಿ ಚಟುವಟಿಕೆಗಳು ಮಂಕಾಗಿ ರೈತರ ಬದುಕು ಇಕ್ಕಟ್ಟಿಗೆ ಸಿಲುಕಿತ್ತು. ಪ್ರಸಕ್ತ ಸಾಲಿನಲ್ಲಿ ಬರುತ್ತಿರುವ ಮುಂಗಾರು ಮಳೆ ಆರಂಭದಿಂದ ರೈತರಲ್ಲಿ ಬಿತ್ತನೆಯ ಭರವಸೆ ಮೂಡಿಸಿದಂತಾಗಿದೆ.