
ಚಿಕ್ಕ ವಯಸ್ಸಿಗೆ ದೊಡ್ಡ ಸಾಧನೆ : ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ಗೆ ಸೇರಿದ ದ್ವಿತಾ ಮೋಹನ್
ಕಂಪ್ಲಿ: ಸ್ಥಳೀಯ ನಿವಾಸಿ ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಮತ್ತು ಸೌಮ್ಯಶ್ರೀ ದಂಪತಿಯ ದ್ವಿತೀಯ ಪುತ್ರಿ ದ್ವಿತಾ ಮೋಹನ್ (6 ತಿಂಗಳು) ಅವರು ಮಹತ್ವದ ಸಾಧನೆ ಮಾಡಿದ್ದಾರೆ. ಯಾವುದೇ ಸಹಾಯ ಅಥವಾ ಬಾಹ್ಯ ಬೆಂಬಲವಿಲ್ಲದೆ ಅತ್ಯಂತ ಹೆಚ್ಚು ಸಮಯ ಕುಳಿತುಕೊಂಡಿರುವ ದಾಖಲೆಯನ್ನು ಸ್ಥಾಪಿಸಿ, ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ಪುಸ್ತಕದಲ್ಲಿ ಹೆಸರು ದಾಖಲಿಸಿದ್ದಾರೆ.
ಜೂನ್ 28, 2025 ರಂದು ಬೆಂಗಳೂರಿನಲ್ಲಿ ನಡೆದ ಈ ಘಟನೆ ಸಮಯದಲ್ಲಿ, ದ್ವಿತಾ ಮೋಹನ್ ಅವರು 44 ನಿಮಿಷ 8 ಸೆಕೆಂಡುಗಳ ಕಾಲ ಕುಳಿತುಕೊಂಡು ವಿಶಿಷ್ಟ ಶಾರೀರಿಕ ಸಮತೋಲನ ಮತ್ತು ಶಕ್ತಿಯನ್ನು ಪ್ರದರ್ಶಿಸಿದರು. ಇದು ಶಿಶು ಹಂತದಲ್ಲಿನ ದೈಹಿಕ ಬೆಳವಣಿಗೆ ಹಾಗೂ ಸಾಮರ್ಥ್ಯಗಳ ಮೈಲಿಗಲ್ಲು ಸಾಧನೆಯಾಗಿದ್ದು, ಇದರ ಮೂಲಕ ಅವರು ಹೊಸ ವಿಶ್ವ ದಾಖಲೆಯನ್ನೇ ನಿರ್ಮಿಸಿದ್ದಾರೆ.
ಈ ಅಸಾಧಾರಣ ಸಾಧನೆಯ ಕುರಿತು ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ಸ್ ಸಂಪಾದಕೀಯ ಹೇಳಿಕೆಯಲ್ಲಿ ಶ್ಲಾಘನೆ ವ್ಯಕ್ತಪಡಿಸಿ, ಅನೇಕ ಪೋಷಕರಿಗೆ ಪ್ರೇರಣೆಯಾಗಿದ್ದಾರೆ ಮತ್ತು ಶಿಶು ಸಾಮರ್ಥ್ಯದ ಪ್ರಭಾವಶಾಲಿ ಉದಾಹರಣೆಯಾಗಿದ್ದಾರೆ ಎಂದು ಹೇಳಿದರು.
ಈ ಹಿಂದೆ, ದ್ವಿತಾ ಅವರ ತಂದೆ ಮೋಹನ್ ಕುಮಾರ್ ದಾನಪ್ಪರು ರಾಷ್ಟ್ರಮಟ್ಟದಲ್ಲಿ ಮ್ಯಾರಥಾನ್ ಮೂಲಕ ದಾಖಲೆಯ ಸಾಧನೆ ಮಾಡಿದ್ದು, ಅವರ ಹಿರಿಯ ಪುತ್ರಿ ದಿಶಾ ಮೋಹನ್ ಫ್ಯಾನ್ಸಿ ಡ್ರೆಸ್ ಮತ್ತು ಭರತನಾಟ್ಯ ಕ್ಷೇತ್ರಗಳಲ್ಲಿ ದಾಖಲೆ ಗಳಿಸಿದ್ದಾರೆ. ಇಂತಹ ಪಟು ಕುಟುಂಬದಲ್ಲಿ ದ್ವಿತಾ ಅವರ ಈ ಸಾಧನೆಯು ಮತ್ತೊಂದು ಸ್ತರವನ್ನು ತಲುಪಿದೆ.
ಈ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ಅಜ್ಜ ಎ.ಸಿ. ದಾನಪ್ಪ (ರಾಜ್ಯ ದಿಶಾ ಸಮಿತಿ ಸದಸ್ಯ), ತಂದೆ ಮೋಹನ್ ಕುಮಾರ್ ದಾನಪ್ಪ ಮತ್ತು ತಾಯಿ ಸೌಮ್ಯಶ್ರೀ, ದ್ವಿತಾ ಮೋಹನ್ ಅವರ ಭವಿಷ್ಯಕ್ಕಾಗಿ ಶುಭಾಶಯಗಳನ್ನು ಸಲ್ಲಿಸಿದ್ದಾರೆ.