ಸ್ವಚ್ಛ ಮತದಾರ ಪಟ್ಟಿ ತಯಾರಿಕೆಗೆ ಕೈಜೋಡಿಸಿ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ
ಕಂಪ್ಲಿ, ಜೂನ್ 11: ರಾಜ್ಯದಲ್ಲಿಯೇ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಮ್ಯಾಪಿಂಗ್ ಕಾರ್ಯದಲ್ಲಿ ಬಳ್ಳಾರಿ ಜಿಲ್ಲೆ ಎರಡನೇ ಸ್ಥಾನ ಪಡೆದಿದ್ದು, ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಮೂಲಕ ಸ್ವಚ್ಛ ಮತದಾರರ ಪಟ್ಟಿ ಸಿದ್ಧಪಡಿಸಲು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ ಕರೆ ನೀಡಿದರು.
ಕಂಪ್ಲಿ ನಗರದ ಡಿಪ್ಲೊಮಾ ಕಾಲೇಜು ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಬಿಎಲ್‌ಒ ಹಾಗೂ ಬಿಎಲ್‌ಒ ಮೇಲ್ವಿಚಾರಕರಿಗೆ ಆಯೋಜಿಸಿದ್ದ ಎಸ್‌ಐಆರ್ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಎಸ್‌ಐಆರ್ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಮಹತ್ವದ ಪ್ರಕ್ರಿಯೆಯಾಗಿದ್ದು, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಜೂನ್ 20ರಿಂದ ಜುಲೈ 30ರವರೆಗೆ ಬಿಎಲ್‌ಒಗಳಿಗೆ ಕಾಲಮಿತಿ ನೀಡಲಾಗಿದ್ದು, ಮತದಾರರ ಮನೆ ಬಾಗಿಲಿಗೆ ಕನ್ನಡದಲ್ಲಿ ಮುದ್ರಿತ ಗಣತಿ ನಮೂನೆ ತಲುಪಿಸಲಾಗುತ್ತದೆ. ನಮೂನೆಯಲ್ಲಿ ಮತದಾರರ ಹೆಸರು, ಎಪಿಕ್ ಸಂಖ್ಯೆ, ಸಂಬಂಧಿಕರ ಹೆಸರು ಹಾಗೂ ವಿಧಾನಸಭಾ ಕ್ಷೇತ್ರದ ವಿವರಗಳು ಇರಲಿವೆ. ಬಿಎಲ್‌ಒಗಳು ಮನೆಗಳಿಗೆ ಕನಿಷ್ಠ ಮೂರು ಬಾರಿ ಭೇಟಿ ನೀಡಿ, ಮತದಾರರಿಂದ ವಿವರಗಳನ್ನು ದೃಢೀಕರಿಸಿಕೊಂಡು ಸಹಿ ಪಡೆದು ನಮೂನೆಗಳನ್ನು ವಾಪಸ್ ಪಡೆಯಬೇಕು ಎಂದು ಸೂಚಿಸಿದರು.
ಆಗಸ್ಟ್ 5ರಿಂದ ಅಕ್ಟೋಬರ್ 3ರವರೆಗೆ ನೋಟಿಸ್ ಹಂತ, ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಪ್ರಕ್ರಿಯೆ ನಡೆಯಲಿದ್ದು, ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಸ್ಮಾರ್ಟ್‌ಫೋನ್ ಬಳಸಲು ಸಾಧ್ಯವಾಗದವರಿಗೆ ನಮೂನೆ ಸಲ್ಲಿಸಲು ಆಯ್ದ ಬಿಎಲ್‌ಒ ಕೇಂದ್ರಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಜೊತೆಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳ (FAQ) ಮಾದರಿ ಪಟ್ಟಿಯನ್ನು ಸಿದ್ಧಪಡಿಸಿ ಸಾರ್ವಜನಿಕರಿಗೆ ತಲುಪಿಸಲಾಗುವುದು ಎಂದರು.
ಮತಗಟ್ಟೆ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆಯ ಮೂಲ ಸ್ತಂಭಗಳಾಗಿದ್ದು, ಪ್ರತಿಯೊಬ್ಬ ಅರ್ಹ ಮತದಾರರ ಹೆಸರನ್ನು ಪಟ್ಟಿಗೆ ಸೇರಿಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಇದೇ ವೇಳೆ ಮತದಾರರ ಪಟ್ಟಿಯಲ್ಲಿ ಹೊಸ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಸ್ಥಳಾಂತರಕ್ಕಾಗಿ ಬಳಸುವ ನಮೂನೆ-6, ನಮೂನೆ-7 ಮತ್ತು ನಮೂನೆ-8ಗಳ ಕುರಿತು ವಿವರವಾಗಿ ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, ಅರ್ಜಿಗಳ ಸಲ್ಲಿಕೆ ಮತ್ತು ಪರಿಶೀಲನೆ ಪ್ರಕ್ರಿಯೆಗಳ ಬಗ್ಗೆ ಬಿಎಲ್‌ಒಗಳಿಗೆ ಮಾರ್ಗದರ್ಶನ ನೀಡಿದರು.
