ಹಿರಿಯ ಗಾಯಕಿ ಎಸ್. ಜಾನಕಿ ನಿಧನ
ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ, 'ಗಾನಕೋಗಿಲೆ' ಎಂದೇ ಪ್ರಸಿದ್ಧರಾಗಿದ್ದ ಎಸ್. ಜಾನಕಿ ಅವರು ಇಂದು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರಾದ ಎಸ್. ಜಾನಕಿ ಅವರು ಆರು ದಶಕಗಳಿಗೂ ಅಧಿಕ ಕಾಲದ ಸಂಗೀತ ಪಯಣದಲ್ಲಿ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗಿದ್ದರು. ಅವರ ಅಪೂರ್ವ ಗಾಯನ ಶೈಲಿ ಮತ್ತು ಸ್ಪಷ್ಟ ಕನ್ನಡ ಉಚ್ಚಾರಣೆ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಗಳಿಸಿತ್ತು.
ವಿಶೇಷವಾಗಿ 1970 ಮತ್ತು 1980ರ ದಶಕದಲ್ಲಿ ವರನಟ ಡಾ. ರಾಜ್‌ಕುಮಾರ್ ಅವರೊಂದಿಗೆ ಹಾಡಿದ ಅನೇಕ ಯುಗಳಗೀತೆಗಳು ಕನ್ನಡ ಚಿತ್ರರಂಗದ ಸುವರ್ಣಯುಗದ ನೆನಪುಗಳಾಗಿವೆ. 'ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ' ಸೇರಿದಂತೆ ಅವರ ಅನೇಕ ಹಾಡುಗಳು ಇಂದಿಗೂ ಸಂಗೀತಪ್ರಿಯರ ಮನದಲ್ಲಿ ಅಜರಾಮರವಾಗಿವೆ.
ಎಸ್. ಜಾನಕಿ ಅವರ ನಿಧನದಿಂದ ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಅಗಲಿಕೆಗೆ ಚಿತ್ರರಂಗದ ಗಣ್ಯರು, ಕಲಾವಿದರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.
ಸದ್ಯ ಅವರ ಪಾರ್ಥಿವ ಶರೀರ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿದ್ದು, ಅಂತ್ಯಕ್ರಿಯೆಯ ಕುರಿತು ಕುಟುಂಬದ ಸದಸ್ಯರು ಇನ್ನೂ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ.
