ಕಂಪ್ಲಿಯಲ್ಲಿ ನಿವೃತ್ತ ಕೆಎಸ್‌ಆರ್‌ಟಿಸಿ ಚಾಲಕರಿಂದ ₹3.97 ಲಕ್ಷ ದೋಚಲು ಯತ್ನ
ಕಂಪ್ಲಿ: ನಿವೃತ್ತ ಕೆಎಸ್‌ಆರ್‌ಟಿಸಿ ಬಸ್ ಚಾಲಕರೊಬ್ಬರು ಬ್ಯಾಂಕ್‌ನಿಂದ ಹಣ ಪಡೆದು ಮನೆಗೆ ತೆರಳುತ್ತಿದ್ದ ವೇಳೆ, ಇಬ್ಬರು ಅಪರಿಚಿತರು ದಾಳಿ ನಡೆಸಿ ಹಣ ಕಸಿದುಕೊಳ್ಳಲು ಯತ್ನಿಸಿರುವ ಘಟನೆ ಕಂಪ್ಲಿ ಪಟ್ಟಣದ ಮಾರುತಿನಗರದಲ್ಲಿ ನಡೆದಿದೆ.
ಮಾರುತಿನಗರದ ನಿವಾಸಿ ಹುಸೇನಸಾಬ್ ಅವರು ಕೆಎಸ್‌ಆರ್‌ಟಿಸಿ ಬಸ್ ಚಾಲಕರಾಗಿ ಕರ್ತವ್ಯ ನಿರ್ವಹಿಸಿ ಎರಡು ತಿಂಗಳ ಹಿಂದೆ ನಿವೃತ್ತರಾಗಿದ್ದರು. ತಮ್ಮ ಪಿಎಫ್ ಹಣ ಕೆನರಾ ಬ್ಯಾಂಕ್ ಖಾತೆಗೆ ಜಮೆಯಾಗಿದ್ದ ಹಿನ್ನೆಲೆಯಲ್ಲಿ, ಆ.28ರಂದು ಮಧ್ಯಾಹ್ನ ಸುಮಾರು 1 ಗಂಟೆಗೆ ತಮ್ಮ ಮಗ ಯುಸಾಫ್‌ನೊಂದಿಗೆ ಸ್ಕೂಟರ್‌ನಲ್ಲಿ ಕಂಪ್ಲಿಯ ಕೆನರಾ ಬ್ಯಾಂಕ್‌ಗೆ ತೆರಳಿ ₹3.97 ಲಕ್ಷ ಹಣವನ್ನು ಡ್ರಾ ಮಾಡಿಕೊಂಡಿದ್ದರು.
ಹಣವನ್ನು ನ್ಯೂಸ್ ಪೇಪರ್‌ನಲ್ಲಿ ಸುತ್ತಿ ಸ್ಕೂಟರ್‌ನ ಡಿಕ್ಕಿಯಲ್ಲಿ ಇಟ್ಟುಕೊಂಡು, ಮಧ್ಯಾಹ್ನ 1.30ರ ಸುಮಾರಿಗೆ ಬ್ಯಾಂಕ್‌ನಿಂದ ಹೊರಟಿದ್ದರು. ಸುಮಾರು 1.45ರ ವೇಳೆಗೆ ಮಾರುತಿನಗರದಲ್ಲಿರುವ ತಮ್ಮ ಮನೆ ಬಳಿ ಸ್ಕೂಟರ್ ನಿಲ್ಲಿಸಿ, ಡಿಕ್ಕಿಯಿಂದ ಹಣವನ್ನು ತೆಗೆದುಕೊಂಡು ಕೈಯಲ್ಲಿ ಹಿಡಿದಿದ್ದ ವೇಳೆ ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಏಕಾಏಕಿ ಅವರ ಮೇಲೆ ದಾಳಿ ನಡೆಸಿದ್ದಾರೆ.
ಒಬ್ಬ ವ್ಯಕ್ತಿ ಹುಸೇನಸಾಬ್ ಅವರನ್ನು ಹಿಡಿದು ಹಣ ಕಸಿದುಕೊಳ್ಳಲು ಪ್ರಯತ್ನಿಸಿದರೆ, ಮತ್ತೊಬ್ಬ ವ್ಯಕ್ತಿ ರಾಡ್‌ನಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಹುಸೇನಸಾಬ್ ಹಾಗೂ ಅವರ ಮಗ “ಕಳ್ಳ, ಕಳ್ಳ” ಎಂದು ಜೋರಾಗಿ ಕೂಗಿಕೊಂಡಿದ್ದಾರೆ.
ಕೂಗಾಟ ಕೇಳಿ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಬರುತ್ತಿರುವುದನ್ನು ಗಮನಿಸಿದ ಆರೋಪಿಗಳು, ತಾವು ತಂದಿದ್ದ ಮೋಟಾರ್‌ಸೈಕಲ್ ಹಾಗೂ ರಾಡ್ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.ಎನ್ನಲಾಗಿದೆ. ಅದೃಷ್ಟವಶಾತ್ ಹಣ ಕಳ್ಳರ ಕೈಗೆ ಸಿಗದೆ ಸುರಕ್ಷಿತವಾಗಿ ಉಳಿದಿದೆ.
ಈ ಕುರಿತು ಹುಸೇನಸಾಬ್ ನೀಡಿದ ದೂರಿನ ಆಧಾರದ ಮೇಲೆ ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 130/2026 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸ್ಥಳದಲ್ಲಿ ಬಿಟ್ಟುಹೋಗಿರುವ ಮೋಟಾರ್‌ಸೈಕಲ್ ಹಾಗೂ ರಾಡ್ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
