ಕಂಪ್ಲಿ ತಾಲೂಕಿನ ಅರಳಹಳ್ಳಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ₹26.10 ಕೋಟಿ ಅನುದಾನ
ಶಾಸಕ ಜೆ.ಎನ್. ಗಣೇಶ್ ಅವರ ನಿರಂತರ ಪ್ರಯತ್ನಕ್ಕೆ ಸರ್ಕಾರದ ಮನ್ನಣೆ
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಅರಳಹಳ್ಳಿಯಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಲು ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ನವೆಂಬರ್ 5ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹರಳಹಳ್ಳಿ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ₹26.10 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿದೆ.
ಕಂಪ್ಲಿ ಕ್ಷೇತ್ರದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಶಾಸಕ ಜೆ.ಎನ್. ಗಣೇಶ್ ಅವರು ನಡೆಸಿದ ನಿರಂತರ ಪ್ರಯತ್ನಕ್ಕೆ ಸರ್ಕಾರದ ಮನ್ನಣೆ ದೊರೆತಿದ್ದು, ಅರಳಹಳ್ಳಿ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅನುಮೋದನೆ ಸಿಕ್ಕಿರುವುದು ಕ್ಷೇತ್ರದ ಪ್ರಗತಿಗೆ ಮಹತ್ವದ ಹೆಜ್ಜೆಯಾಗಿದೆ. ಈ ಯೋಜನೆಯಿಂದ ಹರಳಹಳ್ಳಿಯಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಯಾಗಲಿದ್ದು, ಸ್ಥಳೀಯ ಉದ್ಯಮಿಗಳಿಗೆ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಅವಕಾಶ ದೊರೆಯಲಿದೆ. ಯುವ ಉದ್ಯಮಿಗಳಿಗೆ ಉತ್ತೇಜನ ನೀಡುವುದರ ಜೊತೆಗೆ ಸ್ಥಳೀಯವಾಗಿ ಉದ್ಯೋಗಾವಕಾಶಗಳ ಸೃಷ್ಟಿಗೂ ಸಹಕಾರಿಯಾಗಲಿದೆ.
ಕೈಗಾರಿಕಾ ಪ್ರದೇಶದ ಅಭಿವೃದ್ಧಿಯಿಂದ ಕಂಪ್ಲಿ ತಾಲೂಕಿನ ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಗೆ ಹೊಸ ಅವಕಾಶಗಳು ತೆರೆದುಕೊಳ್ಳುವ ನಿರೀಕ್ಷೆಯಿದೆ.
