Ron : ಅದ್ದೂರಿಯಾಗಿ ನೆರವೇರಿದ ಜಗತ್ ಪ್ರಸಿದ್ಧ ಕೊತಬಾಳ‌ ಶ್ರೀ ಅಡವಿ ಸಿದ್ದೇಶ್ವರ ಜಾತ್ರಾ ಮಹೋತ್ಸವ

ಗದಗ ಜಿಲ್ಲೆ ರೋಣ ತಾಲೂಕಿನ ಕೊತಬಾಳ ಗ್ರಾಮದಲ್ಲಿ ಅಂಕಲಗಿ ಅಡವಿ ಸಿದ್ದೇಶ್ವರ ಜಾತ್ರಾ ಮಹೋತ್ಸವ ದಿನಾಂಕ 8/5/2023 ಸೋಮವಾರ ದಂದು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಮಹಾಮಹಿಮ ವರಗುರು ಶ್ರೀ ಅಡವಿ ಸಿದ್ದೇಶ್ವರರ 68ನೇ ಪುಣ್ಯಸ್ಮರಣೋತ್ಸವ  ಹಾಗೂ ಶ್ರೀ  ಮಠದ ಭವ್ಯ ಪರಂಪರೆಯಲ್ಲಿ ದಿವ್ಯ ಜ್ಯೋತಿಯಾಗಿ ಬಡವರ ಬಾಳಿಗೆ  ಬೆಳಕಾದಂತಹ ಸಾಮೂಹಿಕ ವಿವಾಹಗಳ ಹರಿಕಾರರಾದಂತಹ ಲಿಂಗೈಕ್ಯ ಮನಿಪ್ರ ರಾಜಶೇಖರ ಮಹಾಶಿವಯೋಗಿಗಳ 22ನೇ ಪುಣ್ಯ ಸ್ಮರಣೋತ್ಸವ ನಿಮಿತ್ತವಾಗಿ ಜರುಗಿದ ಜಾತ್ರಾ ಮಹೋತ್ಸವದ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಉಭಯ ಪುಜ್ಯರ ಕರ್ತೃ      _             ರುದ್ರಾಭಿಷೇಕ  ಸಹಸ್ರ  ಬಿಲ್ವಾರ್ಚನೆ  ನೆರವೇರಿತು. ಅಯ್ಯಾಚಾರ , ಲಿಂಗದೀಕ್ಷೆ ಕಾರ್ಯಕ್ರಮ ಜರುಗಿದ ನಂತರ ಊರಿನ ಪ್ರಮುಖ ಬೀದಿಗಳಲ್ಲಿ ಅಡ್ಡಪಲ್ಲಕ್ಕಿ ಉತ್ಸವವು, ಭಜನೆ, ಕುಂಭ,ಕಳಸ ಹಾಗೂ ಕೊಣ್ಣೂರಿನ ಶ್ರೀ ಮಲಪ್ರಭಾ ಮಹಿಳಾ ತಂಡದ ಡೊಳ್ಳಿನ ಕುಣಿತದೊಂದಿಗೆ ಸಂಚರಿಸಿ ಶ್ರೀ ಮಠಕ್ಕೆ ತಲುಪಿತು. ನಂತರ 11:45 ಕ್ಕೆ ಶ್ರೀ ಪಾರ್ವತಿ ಪರಮೇಶ್ವರರ ರಂಗಮಂದಿರದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹಗಳು ಹಾಗೂ ಧರ್ಮ ಸಭೆ ನೆರವೇರಿದವು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮನಿಪ್ರ  ಬಸವಲಿಂಗ ಮಹಾಸ್ವಾಮಿಗಳು ಗವಿಮಠ ನವಲಗುಂದ, ಶ್ರೀ ಮನಿಪ್ರ  ಒಪ್ಪತ್ತೇಶ್ವರ ಮಹಾಸ್ವಾಮಿಗಳು,ಗುಳೇದಗುಡ್ಡ,ಇಂಜೀನವಾರಿ,ಶ್ರೀ ಮನಿಪ್ರ ಗಂಗಾಧರ ಮಹಾಸ್ವಾಮಿಗಳು, ಕೊತಬಾಳ,ಕುರಹಟ್ಟಿ,ಶ್ರೀ ಮನಿಪ್ರ ಶಿವಪೂಜಾ ಶಿವಾಚಾರ್ಯ ಮಹಾಸ್ವಾಮಿಗಳು ನವಗ್ರಹ ಹಿರೇಮಠ ಬದಾಮಿ,  ಶ್ರೀ ಸಿ.ಬ್ರ.ವೀರೇಶ್ವರ        ಮಹಾಸ್ವಾಮಿಗಳು ಹೀರೇವಡ್ಡಟ್ಟಿ ಅವರು ವಹಿಸಿಕೊಂಡಿದ್ದರು.ಸಕಲ ಮಹಾಸ್ವಾಮಿಗಳು ತಮ್ಮ ಉಪದೇಶಾಮೃತವನ್ನು ಭಕ್ತ ಸಮುದಾಯಕ್ಕೆ ಉಣಬಡಿಸಿದರು.ಬಂದ ಭಕ್ತಾದಿಗಳಿಗೆ ಪ್ರಸಾದವಾಗಿ ಚಪಾತಿ,ಕಾಳುಪಲ್ಯ, ಬದನೆಕಾಯಿ ಪಲ್ಯ, ಕೆಂಪು ಚಟ್ನಿ,ಸಜ್ಜಕ, ಉಪ್ಪಿನಕಾಯಿ, ಅನ್ನ ಸಾಂಬಾರ್ ವ್ಯವಸ್ಥೆ ಮಾಡಲಾಗಿತ್ತು.

ಹಿಂದಿನ ರಾತ್ರಿ ಊರಿನ ಮಹಿಳೆಯರು, ಯುವಕರು ಪ್ರಸಾದ ವ್ಯವಸ್ಥೆಗೆ ತರಕಾರಿ ಹೆಚ್ಚುವುದರಿಂದ ಹಿಡಿದು ಚಪಾತಿ ಮಾಡುವವರೆಗೆ ಸಕಲ ಕೆಲಸಗಳಲ್ಲೂ ಅಡುಗೆ ಭಟ್ಟರಿಗೆ ಸಹಾಯ ಮಾಡಿದರು. ಶ್ರೀಮಠವನ್ನು ಹೂವಿನ ಅಲಂಕಾರದಿಂದ ಯುವಕರು ಕಂಗೊಳಿಸುವಂತೆ ಮಾಡಿದರೆ, ಬಣ್ಣ ಬಣ್ಣದ ರಂಗೋಲಿಗಳಿಂದ ಯುವತಿಯರು ಶ್ರೀ ಮಠದ ಆವರಣವನ್ನು ಚಂದಗೊಳಿಸಿದರು. 

ಶ್ರೀ ರಥಕ್ಕೆ ಕಳಸದ ಸೇವೆಯನ್ನು ಕೊತಬಾಳ ಗ್ರಾಮದ ಪಲ್ಲೆದ ಸದ್ಭಕ್ತರು, ಹಗ್ಗದ ಸೇವೆಯನ್ನು ಕುರಹಟ್ಟಿ ಗ್ರಾಮದ ಸಕಲ ಸದ್ಭಕ್ತರು, ಹೂವಿನ ಮಾಲೆಯ ಸೇವೆಯನ್ನು ಕಳಕಪ್ಪ ಅಂಗಡಿ ಶರಣರು, ಹಾಗೂ ರುದ್ರಾಕ್ಷಿ ಮಾಲೆ ಯ ಸೇವೆಯನ್ನು ಕೊತಬಾಳದ  ಶರಣಪ್ಪ ಗಡಾದ ಶರಣರು ನೆರವೇರಿಸಿದರು.

ಸಂಜೆ ಸುರಿಯುವ ಮಳೆಯನ್ನು ಲೆಕ್ಕಿಸದೇ ಸೇರಿದ ಸದ್ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ರಥೋತ್ಸವ ಜರುಗಿತು.ಭಕ್ತರು ತೇರಿಗೆ ಉತ್ತತ್ತಿ, ಬಾಳೆಹಣ್ಣು ಅರ್ಪಿಸಿ ಸಂಪ್ರೀತರಾದರು. 

ಈ ಸಂಭ್ರಮದಲ್ಲಿ ಕೊತಬಾಳ, ಕುರಹಟ್ಟಿ  ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿರಿಯರು ಯುವಕರು ಮಹಿಳೆಯರು ಮಕ್ಕಳು ಪಾಲ್ಗೊಂಡಿದ್ದರು.

Join Whatsapp Group : ಕ್ಷಣ-ಕ್ಷಣದ ನ್ಯೂಸ್ ಅಪ್ಡೇಟ್

Reported By : ಗೀತಾ ಶ್ರೀಧರ ಯಾಳಗಿ, ಸಿದ್ಧಿ ಟಿವಿ, ಕೊತಬಾಳ


Previous Post Next Post

Contact Form

f="https://unpkg.com/video.js/dist/video-js.css" rel="stylesheet">