150 ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದ ಜೋಗತಿ ರಾಜಮ್ಮ
ಕಂಪ್ಲಿ: ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಉಪ್ಪಾರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶ್ರೀ ಮಾತಾ ಜೋಗತಿ ರಾಜಮ್ಮ ಅಮ್ಮನವರು 150 ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು.
ಭಿಕ್ಷಾಟನೆಯಿಂದ ಬಂದ ಹಣವನ್ನು ಕೂಡಿಟ್ಟು ಸಮಾಜ ಸೇವೆಗೆ ಬಳಸುತ್ತಿರುವ ಜೋಗತಿ ರಾಜಮ್ಮ ಅವರು, ತಮ್ಮ ಸೇವಾ ಕಾರ್ಯಗಳ ಮೂಲಕ ಇತರ ಮಂಗಳಮುಖಿಯರಿಗೆ ಸ್ಪೂರ್ತಿಯಾಗಿದ್ದಾರೆ. ಈ ಹಿಂದೆಯೂ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿರುವ ರಾಜಮ್ಮ ಅವರ ಸೇವೆಯನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರದ ಮೂಲಕ ಶ್ಲಾಘಿಸಿದ್ದರು ಎಂದು ತಿಳಿಸಲಾಯಿತು.
ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದ ಜೋಗತಿ ರಾಜಮ್ಮ ಅವರನ್ನು ಗ್ರಾಮಸ್ಥರು ಹಾಗೂ ಶಾಲೆಯ ಶಿಕ್ಷಕರ ಬಳಗದ ವತಿಯಿಂದ ಸನ್ಮಾನಿಸಿ, ಅವರ ಸಮಾಜ ಸೇವೆಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಹೊಸಮನೆ ಹನುಮಂತಪ್ಪ, ಉಪಾಧ್ಯಕ್ಷ ಗೌಡ್ರು ಕನಕಪ್ಪ ಹಾಗೂ ಸರ್ವ ಸದಸ್ಯರು, ಮುಖ್ಯಗುರುಗಳಾದ ಸಂಗನಗೌಡ ಸರ್, ಸವಿತಾ ಮೇಡಂ ಸೇರಿದಂತೆ ಶಿಕ್ಷಕರ ಬಳಗ ಹಾಗೂ ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರಾದ ಶಂಕರ, ನಾಗರಾಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜೋಗತಿ ರಾಜಮ್ಮ ಅವರ ಈ ಸಮಾಜಮುಖಿ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
