ಹಳೆಯ ವಿದ್ಯುತ್ ಕಂಬಗಳ ಬದಲಾವಣೆ, ಬೀದಿದೀಪ ಅಳವಡಿಕೆಗೆ ಒತ್ತಾಯ
ಜೆಸ್ಕಾಂ ಹಾಗೂ ಪುರಸಭೆಗೆ ಯುವಕರ ಮನವಿ
ಕಂಪ್ಲಿ, ಸೆ.30: ಪಟ್ಟಣದ 2ನೇ ವಾರ್ಡ್ ವ್ಯಾಪ್ತಿಯಲ್ಲಿರುವ ಶ್ರೀ ಹೇರೂರು ವಿರುಪಣ್ಣ ತಾತನ ಮಠಕ್ಕೆ ಹೋಗುವ ರಸ್ತೆಯಲ್ಲಿನ ಜೀರ್ಣಾವಸ್ಥೆಯಲ್ಲಿರುವ ವಿದ್ಯುತ್ ಕಂಬಗಳನ್ನು ಬದಲಿಸಿ, ಬೀದಿದೀಪಗಳನ್ನು ಅಳವಡಿಸುವಂತೆ ಒತ್ತಾಯಿಸಿ ಯುವಕರು ಜೆಸ್ಕಾಂ ಕಚೇರಿ ಹಾಗೂ ಪುರಸಭೆಗೆ ಮನವಿ ಸಲ್ಲಿಸಿದರು.
ಮಠದ ಮುಖ್ಯ ದ್ವಾರದಿಂದ ಮಠದವರೆಗೆ ಅಳವಡಿಸಲಾಗಿರುವ ವಿದ್ಯುತ್ ಕಂಬಗಳು ಹಲವು ವರ್ಷಗಳಷ್ಟು ಹಳೆಯದಾಗಿದ್ದು, ಸದ್ಯ ಜೀರ್ಣಾವಸ್ಥೆಗೆ ತಲುಪಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಅಲ್ಲದೆ ವಿದ್ಯುತ್ ತಂತಿಗಳು ಕೆಳಕ್ಕೆ ಜೋತುಬಿದ್ದಿರುವುದರಿಂದ ರಸ್ತೆ ಬದಿಯ ಮರಗಳು ಹಾಗೂ ಸಂಚರಿಸುವ ವಾಹನಗಳಿಗೆ ತಗುಲುತ್ತಿರುವುದಾಗಿ ಅವರು ದೂರಿದ್ದಾರೆ.
ಗಾಳಿ ಜೋರಾಗಿ ಬೀಸುವ ಸಂದರ್ಭದಲ್ಲಿ ವಿದ್ಯುತ್ ತಂತಿಗಳು ಪರಸ್ಪರ ಸ್ಪರ್ಶಿಸಿ ಬೆಂಕಿ ಕಿಡಿಗಳು ರಸ್ತೆ ಮೇಲೆ ಬೀಳುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಪ್ರತಿನಿತ್ಯ ನೂರಾರು ಭಕ್ತರು ಹಾಗೂ ಸಾರ್ವಜನಿಕರು ಶ್ರೀ ಹೇರೂರು ವಿರುಪಣ್ಣ ತಾತನ ಮಠಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಸಮಯದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇರುವುದರಿಂದ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ.
ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಜೀರ್ಣಗೊಂಡಿರುವ ವಿದ್ಯುತ್ ಕಂಬಗಳನ್ನು ಬದಲಿಸುವುದರ ಜೊತೆಗೆ ವಿದ್ಯುತ್ ತಂತಿಗಳನ್ನು ಸಮರ್ಪಕವಾಗಿ ಅಳವಡಿಸಿ, ರಸ್ತೆ ಮಾರ್ಗದಲ್ಲಿ ಅಗತ್ಯ ಸಂಖ್ಯೆಯ ಬೀದಿದೀಪಗಳನ್ನು ಅಳವಡಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ 2 ಮತ್ತು 3ನೇ ವಾರ್ಡ್‌ನ ಯುವಕರಾದ ಬಂಡಿ ರಮೇಶ್, ಬಂಡಾರಿ ಮಂಜುನಾಥ, ರಾಜಸಾಬ್, ಬಳ್ಳಾರಿ ಪರಮೇಶ, ಗಾಳೇಪ್ಪ, ವಿ. ಪರಶುರಾಮ, ಕೆ. ಶಿವಾಜಿ ಸೇರಿದಂತೆ ಅನೇಕ ಯುವಕರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
