Kampli : ವಿರುಪಣ್ಣ ತಾತನವರ ಮಠಕ್ಕೆ ಸುಗಮ ರಸ್ತೆ: ಶಾಸಕ ಗಣೇಶ್ ಭರವಸೆ


ವಿರುಪಣ್ಣ ತಾತನವರ ಮಠಕ್ಕೆ ಸುಗಮ ರಸ್ತೆ: ಶಾಸಕ ಗಣೇಶ್ ಭರವಸೆ

ಕಂಪ್ಲಿ: 0.6 ಕಿ.ಮೀ. ಕಾಲುವೆ ರಸ್ತೆ ಅಭಿವೃದ್ಧಿಗೆ ಯುವಕರು, ವಿದ್ಯಾರ್ಥಿಗಳ ಮನವಿ

ಕಂಪ್ಲಿ: ಪಟ್ಟಣದ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಸುಕ್ಷೇತ್ರ ಶ್ರೀ ಹೇರೂರು ವಿರುಪಣ್ಣ ತಾತನವರ ಮೂಲಮಠಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 0.6 ಕಿ.ಮೀ. ಉದ್ದದ ಕಾಲುವೆ ರಸ್ತೆಯನ್ನು ಸಿಸಿ ರಸ್ತೆ ಅಥವಾ ಡಾಂಬರು ರಸ್ತೆಯಾಗಿ ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ, 2, 3 ಹಾಗೂ 10ನೇ ವಾರ್ಡ್‌ಗಳ ಯುವಕರು ಮತ್ತು ವಿದ್ಯಾರ್ಥಿಗಳು ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರಿಗೆ ಮನವಿ ಸಲ್ಲಿಸಿದರು.

ಮೂಲಮಠಕ್ಕೆ ಪ್ರತಿನಿತ್ಯ ಭಕ್ತರು, ಸಾರ್ವಜನಿಕರು ಹಾಗೂ ವಿವಿಧ ಭಾಗಗಳಿಂದ ಸಂತರು ಮತ್ತು ಶ್ರೀಗಳು ಭೇಟಿ ನೀಡುತ್ತಾರೆ. ಅಲ್ಲದೆ, ಮಠದ ಆವರಣವು ಹಸಿರಿನಿಂದ ಕೂಡಿದ ಪ್ರಶಾಂತ ವಾತಾವರಣ ಹೊಂದಿರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಅನೇಕ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಹೀಗಾಗಿ ಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ದೃಷ್ಟಿಯಿಂದ ಮಹತ್ವದ್ದಾಗಿದೆ.

ಆದರೆ, ಪ್ರಸ್ತುತ ರಸ್ತೆ ಹದಗೆಟ್ಟಿದ್ದು, ಮಳೆಗಾಲದಲ್ಲಿ ಕೆಸರುಮಯವಾಗುವುದರಿಂದ ಮಠಕ್ಕೆ ತೆರಳುವ ಭಕ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಸುಮಾರು 0.6 ಕಿ.ಮೀ. ಉದ್ದದ ರಸ್ತೆಯನ್ನು ಸಿಸಿ ರಸ್ತೆ ಅಥವಾ ಡಾಂಬರು ರಸ್ತೆಯಾಗಿ ಅಭಿವೃದ್ಧಿಪಡಿಸಬೇಕು. ಶಾಸಕರು ಸ್ಥಳ ಪರಿಶೀಲನೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಶೀಘ್ರವಾಗಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.

ಶೀಘ್ರ ರಸ್ತೆ ಅಭಿವೃದ್ಧಿ: ಶಾಸಕ ಗಣೇಶ್ ಭರವಸೆ

ಮನವಿಗೆ ಸ್ಪಂದಿಸಿದ ಶಾಸಕ ಜೆ.ಎನ್. ಗಣೇಶ್, “ನಾನು ಹಲವಾರು ಕಾರ್ಯಕ್ರಮಗಳಿಗಾಗಿ ಮಠಕ್ಕೆ ಭೇಟಿ ನೀಡಿದ್ದೇನೆ. ಮಠದ ಆವರಣದಲ್ಲಿ ಹಸಿರಿನಿಂದ ಕೂಡಿದ ಪ್ರಶಾಂತ ವಾತಾವರಣವಿದೆ. ಈ ಮಠವು ಧಾರ್ಮಿಕ ಹಾಗೂ ಶೈಕ್ಷಣಿಕ ದೃಷ್ಟಿಯಿಂದ ಮಹತ್ವ ಹೊಂದಿದೆ. ಸಾರ್ವಜನಿಕರು, ಭಕ್ತರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಶೀಘ್ರದಲ್ಲೇ ಅಭಿವೃದ್ಧಿಪಡಿಸಲಾಗುವುದು” ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಠದ ಪ್ರಧಾನ ಅರ್ಚಕರಾದ ಸಿ.ಎಂ. ವೀರಯ್ಯ, ಮಂಜುನಾಥ, ಬಂಡಿ ರಮೇಶ್, ತಿಮ್ಮಣ್ಣ, ಪರ್ಸ, ಗಾಳೇಪ್ಪ, ಮಣಿಕಂಠ, ರವಿ, ರುದ್ರ, ಶಿವಾಜಿ, ಪ್ರಶಾಂತ ಸೇರಿದಂತೆ ಅನೇಕ ಯುವಕರು ಉಪಸ್ಥಿತರಿದ್ದರು.

ವರದಿ: Siddi TV
Previous Post Next Post

Contact Form

f="https://unpkg.com/video.js/dist/video-js.css" rel="stylesheet">