Gangavathi : ಗಂಗಾವತಿ–ದರೋಜಿ ರೈಲು ಮಾರ್ಗಕ್ಕೆ ಅನುದಾನ ಬಿಡುಗಡೆಗೆ ಒತ್ತಾಯ


ಗಂಗಾವತಿ–ದರೋಜಿ ರೈಲು ಮಾರ್ಗಕ್ಕೆ ಅನುದಾನ ಬಿಡುಗಡೆಗೆ ಒತ್ತಾಯ

ಗಂಗಾವತಿ, ಸೆ.27: ಗಂಗಾವತಿ–ದರೋಜಿ (36 ಕಿ.ಮೀ) ಹೊಸ ಬ್ರಾಡ್‌ಗೇಜ್ ರೈಲ್ವೆ ಮಾರ್ಗಕ್ಕೆ ಅನುದಾನ ಬಿಡುಗಡೆ ಸೇರಿದಂತೆ ಗಂಗಾವತಿ ಭಾಗದ ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.

ಬೆಂಗಳೂರಿನಲ್ಲಿರುವ ಸಚಿವರ ಕಚೇರಿಯಲ್ಲಿ ಗಂಗಾವತಿಯ ಮಾಜಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಮನವಿ ಸಲ್ಲಿಸಿ, ಗಂಗಾವತಿ ಪ್ರದೇಶವು ಭತ್ತದ ನಾಡು, ಹನುಮನ ನಾಡು ಹಾಗೂ ಹಂಪಿ–ಕಿಷ್ಕಿಂದೆಯ ಹೆಬ್ಬಾಗಿಲಾಗಿದ್ದರೂ ರೈಲ್ವೆ ಸಂಪರ್ಕದಲ್ಲಿ ಹಿಂದುಳಿದಿದೆ ಎಂದು ಗಮನ ಸೆಳೆದರು.

ಗಂಗಾವತಿ–ದರೋಜಿ ನೇರ ರೈಲು ಮಾರ್ಗ ನಿರ್ಮಾಣವಾದರೆ ಬಳ್ಳಾರಿಗೆ ಹೋಗುವ ಅಂತರವು ಸುಮಾರು 57 ಕಿ.ಮೀ ಕಡಿಮೆಯಾಗಲಿದ್ದು, ಗಂಗಾವತಿ, ಕಂಪ್ಲಿ ಹಾಗೂ ಸಂಡೂರು ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು. ಯೋಜನೆಯ ಸರ್ವೇ ಹಾಗೂ ಡಿಪಿಆರ್ ಈಗಾಗಲೇ ಸಿದ್ಧವಾಗಿದ್ದು, 2026-27ನೇ ಸಾಲಿನಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಸಿಂಧನೂರು–ಗಂಗಾವತಿ–ಹುಬ್ಬಳ್ಳಿ ಪ್ಯಾಸೆಂಜರ್ ರೈಲನ್ನು ಗೋವಾದ ಮಡಗಾಂವ್ ವರೆಗೆ ವಿಸ್ತರಿಸುವಂತೆ ಮನವಿ ಮಾಡಲಾಯಿತು. ಇದರಿಂದ ಹಂಪಿ, ಆನೆಗುಂದಿ ಹಾಗೂ ಕಿಷ್ಕಿಂದಾ ಭಾಗಗಳಿಗೆ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗುವುದರ ಜೊತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ ಎಂದು ತಿಳಿಸಲಾಯಿತು.

ಸಿಂಧನೂರು–ಗಂಗಾವತಿ–ಕೊಪ್ಪಳ ಮಾರ್ಗವಾಗಿ ಬೆಂಗಳೂರಿಗೆ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಮಂಜೂರು ಮಾಡಬೇಕು ಎಂಬ ಬೇಡಿಕೆಯನ್ನೂ ಪ್ರತಿನಿಧಿಗಳು ಮುಂದಿಟ್ಟರು. ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ರೋಗಿಗಳ ಸಂಚಾರಕ್ಕೆ ಇದು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಗಂಗಾವತಿಯ ನೂತನ ಬಸ್ ನಿಲ್ದಾಣದ ಸಮೀಪ “ಗಂಗಾವತಿ ನ್ಯೂ ಸಿಟಿ ಹಾಲ್ಟ್” ಹೆಸರಿನ ಹೊಸ ರೈಲ್ವೆ ನಿಲ್ದಾಣ ಅಥವಾ ಹಾಲ್ಟ್ ನಿರ್ಮಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಇದರಿಂದ ಬಸ್ ಮತ್ತು ರೈಲು ಸಂಪರ್ಕ ವ್ಯವಸ್ಥೆ ಮತ್ತಷ್ಟು ಸುಗಮವಾಗಲಿದೆ ಎಂದು ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಗಂಗಾವತಿ ತಾಲೂಕು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸುರೇಶ್ ಸಿಂಗನಾಳ, ವಕೀಲರ ಸಂಘದ ಕಾರ್ಯದರ್ಶಿ ಹೆಚ್.ಎಂ. ಮಂಜುನಾಥ, ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಸದಸ್ಯ ಕೆ. ವಿಶ್ವನಾಥ ಸ್ವಾಮಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">