ಕಂಪ್ಲಿ : ನಗರದ ಷಾಮಿಯಾಚಂದ್ ಶಾಲಾ ಆವರಣದಲ್ಲಿ ನಡೆಯುತ್ತಿರುವ ಕಂಪ್ಲಿ ವಲಯ-1ರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಕ್ರೀಡಾಕೂಟಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಪೋಷಕರು ಹಾಗೂ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಅಥ್ಲೆಟಿಕ್ಸ್ (ವೈಯಕ್ತಿಕ ಆಟಗಳು) ವಿಭಾಗದಲ್ಲಿ ಹೈಜಂಪ್ ಹಾಗೂ ಲಾಂಗ್ ಜಂಪ್ ಸ್ಪರ್ಧೆಗಳನ್ನು ನಡೆಸಲಾಗಿಲ್ಲ ಎನ್ನಲಾಗಿದ್ದು, ಈ ಎರಡು ವಿಭಾಗಗಳಿಗೆ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರೂ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ, ಆಯೋಜಕರ ಬಳಿ ಜಂಪ್ ಸ್ಪರ್ಧೆಗಳನ್ನು ನಡೆಸಲು ಅಗತ್ಯವಿರುವ ‘ಜಂಪ್ ಫಿಟ್’ ಅಥವಾ ಸೂಕ್ತ ಕ್ರೀಡಾ ಸೌಲಭ್ಯವಿಲ್ಲ ಎಂಬ ಕಾರಣ ನೀಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಆದರೆ, ಸ್ಪರ್ಧೆಗಳಿಗೆ ಮುನ್ನವೇ ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿತ್ತು ಎಂದು ಪೋಷಕರು ಪ್ರಶ್ನಿಸಿದ್ದಾರೆ.
ಇನ್ನೊಂದೆಡೆ, ಕಬಡ್ಡಿ ಪಂದ್ಯದಲ್ಲಿಯೂ ನಿಯಮ ಉಲ್ಲಂಘನೆಯ ಆರೋಪ ಕೇಳಿಬಂದಿದೆ. ಆಯಾ ಶಾಲೆಯ ವಿದ್ಯಾರ್ಥಿಗಳ ಬದಲಿಗೆ ಹೊರಗಿನ ಆಟಗಾರರನ್ನು ತಂಡದಲ್ಲಿ ಆಡಿಸಿ ಪಂದ್ಯ ಗೆಲ್ಲಿಸಲಾಗಿದೆ ಎಂಬ ಆರೋಪವನ್ನು ಕೆಲವರು ಮಾಡಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಕ್ರೀಡಾ ಅವಕಾಶಗಳಿಗೆ ಯಾವುದೇ ರೀತಿಯ ತಾರತಮ್ಯವಾಗಬಾರದು. ನೋಂದಣಿ ಮಾಡಿಕೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ನಿಯಮಾನುಸಾರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಬೇಕು ಹಾಗೂ ಕ್ರೀಡಾಕೂಟದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಪೋಷಕರು ಹಾಗೂ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಈ ಕುರಿತು ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಆರೋಪಗಳ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

